ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಆಯ್ಕೆಯಾಗಿರುವ ಸರಕಾರ ಸ್ಥಾಪನೆಗೆ ಸಿದ್ಧತೆ ನಡೆಯುತ್ತಿದ್ದು, ಕಳೆದ ವರ್ಷದಿಂದ ಪಾಕಿಸ್ತಾನ ಗಲಭೆಪೀಡಿತವಾದಂದಿನಿಂದ ಸ್ಥಗಿತಗೊಂಡಿರುವ ಭಾರತ-ಪಾಕ್ ನಡುವಿನ ಸಮಗ್ರ ಮಾತುಕತೆ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದಲ್ಲಿ ಮುಂದಿನ ತಿಂಗಳಿಂದ ಮತ್ತೆ ಮುಂದುವರಿಯಲಿದೆ.
ವಿದೇಶಾಂಗ ಕಾರ್ಯದರ್ಶಿಗಳ ನಡುವಿನ ಮಾತುಕತೆಗಾಗಿ ಉಭಯ ಬಣಗಳು ನಿಖರ ದಿನಾಂಕ ನಿಗದಿಗಾಗಿ ಕಾರ್ಯಗತಗೊಂಡಿವೆ. ಪಾಕಿಸ್ತಾನದಲ್ಲಿ ತುರ್ತುಪರಿಸ್ಥಿತಿ ಹೇರಿದ್ದ ಕಾರಣ ಉಭಯ ರಾಷ್ಟ್ರಗಳ ನಡುವಿನ ಕಾರ್ಯದರ್ಶಿ ಮಟ್ಟದ ಸಮಗ್ರ ಮಾತುಕತೆ ಕಳೆದ ಅಕ್ಟೋಬರ್‌ನಲ್ಲಿ ನಡೆದ ನಾಲ್ಕನೆ ಸುತ್ತಿನ ಬಳಿಕ ಮುಂದುವರಿದಿರಲಿಲ್ಲ.
ಮುಂದಿನ ತಿಂಗಳ ಸಭೆಯಲ್ಲಿ ನಾಲ್ಕನೆ ಸುತ್ತಿನ ಮಾತುಕತೆಗಳ ಅಭಿವೃದ್ಧಿಯ ಪರಾಮರ್ಶೆ ಮಾಡಲಿದ್ದು, ಐದನೆ ಸುತ್ತಿನ ಮೂತುಕತೆಯಲ್ಲಿ ವೇಳಾಪಟ್ಟಿ ನಿಗದಿ ಪಡಿಸಲಾಗುವುದು. ಪಾಕಿಸ್ತಾನದಲ್ಲಿ ಸರಕಾರ ಅಧಿಕಾರ ಸ್ವೀಕರಿಸುವುದನ್ನು ಕಾಯುತ್ತಿರುವ ಭಾರತ ಆ ಬಳಿಕ ಸಮಗ್ರ ಮಾತುಕತೆಯನ್ನು ಮುಂದುವರಿಸಲು ಉದ್ಯುಕ್ತವಾಗಿದೆ.
ಪಾಕಿಸ್ತಾನದಲ್ಲಿ ಸರಕಾರ ರಚನೆಯಾದ ತಕ್ಷಣ ಉಭಯ ರಾಷ್ಟ್ರಗಳ ವಿದೇಶಾಂಗ ಕಾರ್ಯದರ್ಶಿಗಳು ನಾಲ್ಕನೆ ಸುತ್ತಿನ ಸಮಗ್ರ ಮಾತುಕತೆ ಮುಂದುವರಿಸಲಿದ್ದಾರೆ. ಅಲ್ಲಿ ಸರಕಾರ ಅಧಿಕಾರ ವಹಿಸಿಕೊಳ್ಳುವತನಕ ಕಾಯಬೇಕು" ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
|