ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆದ್ದು ಬೀಗುತ್ತಿರುವ ಎಡಪಕ್ಷಗಳು, ಇದೀಗ ಯುಪಿಎ ಸರಕಾರದ ನೀತಿಗಳ ವಿರುದ್ಧ ಇನ್ನಷ್ಟು ರಭಸದಿಂದ ಮಾತಾಡಲಾರಂಭಿಸಿವೆ. ಇದೀಗ ಎಡಪಕ್ಷಗಳು ಅಣು ಒಪ್ಪಂದದ ವಿರುದ್ಧ ಕೆಂಬಾವುಟ ತೋರಿಸಲು ಸನ್ನದ್ದರಾಗುತ್ತಿದ್ದಾರೆ.
ಒಂದೆಡೆ, ಐಎಇಎ ಜತೆಗಿನ ಮಾತುಕತೆ ಸಂಪೂರ್ಣಗೊಂಡ ತಕ್ಷಣ, ಮಾತುಕತೆಯ ಕುರಿತು ಎಡಪಕ್ಷಗಳೊಂದಿಗೆ ಮಾತುಕತೆ ನಡೆಸುವುದಾಗಿ ಸರಕಾರ ಹೇಳಿದೆ. ಈ ಪ್ರಮುಖ ಮಾತುಕತೆಯಲ್ಲಿ ಪಾಲ್ಗೊಂಡ ಸಂಧಾನಕಾರರು ವಿಯೆನ್ನಾದಿಂದ ಮರಳಿದ ಬಳಿಕ ಸರಕಾರ ಎಡಪಕ್ಷದೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಿದೆ.
"ನಾವು ಈ ಒಪ್ಪಂದವನ್ನು ನಿರಾಕರಿಸುತ್ತಲೇ ಬಂದಿದ್ದೇವೆ. ನಿರ್ಧಾರ ಕೈಗೊಳ್ಳುವುದು ಕಾಂಗ್ರೆಸ್‌ಗೆ ಬಿಟ್ಟ ವಿಚಾರ. ಈ ಒಪ್ಪಂದವನ್ನು ವಿರೋಧಿಸುವ ನಮ್ಮ ನಿಲುವು ಸ್ಪಷ್ಟ ಎಂದು ಸಿಪಿಎಂ ಪಾಲಿಟ್‌ಬ್ಯೂರೋ ಸದಸ್ಯ ಸೀತಾರಾಂ ಯಚೂರಿ ಹೇಳಿದ್ದಾರೆ.
ಸರಕಾರ ತನ್ನ ಅಣು ಕಾರ್ಯಕ್ರಮವನ್ನು ಸ್ಪಷ್ಟವಾಗಿ ಬಹಿರಂಗ ಪಡಿಸಬೇಕು ಎಂದು ಪ್ರಕಾಶ್ ಕಾರಟ್ ಒತ್ತಾಯಿಸಿದ್ದಾರೆ. ಯುಪಿಎ ಸರಕಾರದ ಆರ್ಥಿಕ ನೀತಿಗಳನ್ನು ಖಂಡಿಸಲು ಅವರು ತ್ರಿಪುರ ಚುನಾವಣಾ ಫಲಿತಾಂಶಗಳನ್ನು ಬಳಸಿಕೊಂಡರು. ಈ ಬಾರಿ ಹೆಚ್ಚಿನ ನಿಷ್ಠಾವಂತ ಕಾಂಗ್ರೆಸ್ಸಿಗ ಮತದಾರರೂ ಸಹ ಎಡಪಕ್ಷಗಳಿಗೆ ಮತಚಲಾಯಿಸಿದ್ದಾರೆ ಎಂದು ಕಾರಟ್ ನುಡಿದರು.
|