ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲೇ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ವೇಳೆ ಹೇಳಿದ್ದಾರೆ. ಅಲ್ಲದೆ, ಮಸೂದೆಗೆ ಒಮ್ಮತ ಮೂಡಿಸುವ ಸಲುವಾಗಿ ಮಾರ್ಚ್ 20ರಂದು ಸರ್ವಪಕ್ಷ ಸಭೆಯನ್ನು ಕರೆಯುವುದಾಗಿಯೂ ಅವರು ತಮ್ಮನ್ನು ಭೇಟಿ ಮಾಡಿರುವ ಮಹಿಳಾ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಕೃಷ್ಣಾ ತಿರಾಟ್, ಮೋಹಿನಿ ಗಿರಿ ಹಾಗೂ ನಫಿಸಾ ಅಲಿ ಅನರನ್ನೊಳಗೊಂಡ ನಿಯೋಗವು ಪ್ರಧಾನಿ ಹಾಗೂ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರನ್ನು ಭೇಟಿ ಮಾಡಿ ತಮ್ಮ ಬೇಡಿಕೆ ಸಲ್ಲಿಸಿದ ವೇಳೆ ಪ್ರಧಾನಿ ಈ ಭವವಸೆ ನೀಡಿದ್ದಾರೆ.
ಏತನ್ಮಧ್ಯೆ, ತನ್ನ ಅವಧಿಯಲ್ಲೇ ಮಹಿಳಾ ಮೀಸಲಾತಿ ಮಸೂದೆ ಮಂಡನೆಯಾಗಲಿ ಎಂಬುದಾಗಿ ತಾನು ಇಚ್ಛಿಸುವುದಾಗಿ ಲೋಕ ಸಭಾ ಸ್ಪೀಕರ್ ಸೋಮನಾಥ ಚಟರ್ಜಿ ಹೇಳಿದ್ದಾರೆ. ಪ್ರತಿಅಧಿವೇಶನದಲ್ಲೂ ಈ ಮಸೂದೆ ಮಂಡನೆಯಾಗುತ್ತದೆ ಎಂದು ಹೇಳಲ್ಪಟ್ಟರೂ ಹಾಗಾಗಲಿಲ್ಲ ಎಂದು ಅವರು ಖೇದ ವ್ಯಕ್ತಪಡಿಸಿದರು.
ಮಹಿಳಾ ಮೀಸಲಾತಿ ಮಸೂದೆ ಸಂಸತ್ತಿನ ಅನುಮತಿ ಪಡೆದು ಶಾಸನವಾದರೆ ಮೂರನೆ ಒಂದು ಭಾಗದಷ್ಟು ಸ್ಥಾನಗಳು ಮಹಿಳೆಯರಿಗೆ ಲಭಿಸುತ್ತದೆ. ವಿಧಾನ ಸಭೆಗಳಿಗೂ ಈ ನಿಯಮ ಅನ್ವಯಿಸುತ್ತದೆ. ಆದರೆ ಮಹಿಳಾ ಮೀಸಲಾತಿಯೊಂದಿಗೆ ಹಿಂದುಳಿದ ವರ್ಗಗಳ ಮಹಿಳೆಯರಿಗೂ ಇಂತಿಷ್ಟು ಮೀಸಲಾತಿ ನೀಡಬೇಕು ಎಂದು ಕೆಲವು ಪಕ್ಷಗಳು ಹಠ ಹಿಡಿದ ಕಾರಣ ಮಸೂದೆಯ ಮಂಡನೆ 1996ರಿಂದ ನನೆಗುದಿಗೆ ಬಿದ್ದಿದೆ.
|