ಅಂತಾರಾಷ್ಟ್ರೀಯ ಅಣುಕಾವಲುಗಾರ ಐಇಎಜತೆಗಿನ ಭದ್ರತಾ ಒಪ್ಪಂದದ ಕುರಿತು ಭಾರತದ ಮಾತುಕತೆ ಕೊನೆಗೊಂಡಿದ್ದು, ಮುಂದಿನ ಕ್ರಮಗಳ ಕುರಿತು ಚರ್ಚಿಸಲು ಯುಪಿಎಯು ಎಡಪಕ್ಷಗಳೊಂದಿಗೆ ಸದ್ಯವೇ ಮಾತುಕತೆ ನಡೆಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಐಎಇಎ ಜನತೆಗಿನ ಮಾತುಕತೆಯು ಯಾವ ಹಂತದಲ್ಲಿದೆ ಎಂಬುದಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡುತ್ತಿದ್ದ ಅವರು, "ಆ ಹಂತವು ಈಗ ಮುಗಿದಿದೆ. ಯಾಕೆಂದರೆ ಮಾತುಕತೆ ಕೊನೆಗೊಂಡಿದೆ" ಎಂದು ನುಡಿದರು.
ಭಾರತ-ಅಮೆರಿಕ ನಾಗರಿಕ ಅಣು ಒಪ್ಪಂದ ಕಾರ್ಗತವಾಗಬೇಕಿದ್ದರೆ, ಸುಭದ್ರತಾ ಒಪ್ಪಂದಗಳು ಪೂರ್ವಷರತ್ತಾಗಿದೆ.
ಐಎಇಎ ಜತೆಗಿನ ಮಾತುಕತೆ ಮುಗಿದ ಬಳಿಕ ಸರಕಾರಕ್ಕೆ ಬಾಹ್ಯ ಬೆಂಬಲ ನೀಡುತ್ತಿರುವ ಎಡಪಕ್ಷಗಳೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದ್ದಾಗಿ ನುಡಿದ ಮುಖರ್ಜಿ, ಈ ಮಾತುಕತೆಗಳು ಸದ್ಯವೇ ನಡೆಯಲಿದೆ ಎಂದು ನುಡಿದರು.
ಪದ್ಮವಿಭೂಷಣ ಪ್ರಶಸ್ತಿ ಪಡೆದ ಅವರನ್ನು ಸನ್ಮಾನಿಸಲು ಗ್ಲೋಬಲ್ ಇಂಡಿಯಾ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಪಾರ್ಶ್ವದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಭಾರತವು ಅಮೆರಿಕದೊಂದಿಗೆ ಅಣುಒಪ್ಪಂದಕ್ಕೆ ಮುಂದುವರಿದುದೇ ಆದಲ್ಲಿ ಬೆಂಬಲ ಹಿಂತೆಗೆಯುವುದಾಗಿ ಎಡಪಕ್ಷಗಳು ಹೇಳುತ್ತಲೆ ಬಂದಿವೆ. ಸರಕಾರದ ಸ್ಥಿರತೆ ನಮ್ಮ ಗುರಿ ಅಲ್ಲ ಎಂಬುದಾಗಿ ಎಡಪಕ್ಷಗಳು ಇತ್ತೀಚಿಗೆ ಹೇಳಿಕೆ ನೀಡಿವೆ. ಅಲ್ಲದೆ ತ್ರಿಪುರಾ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿದ ಬಳಿಕ, ಕಾಂಗ್ರೆಸ್ ಧೋರಣೆಗಳನ್ನು ಲೇವಡಿ ಮಾಡಿದ್ದ ಎಡಪಕ್ಷ ಅಣುಒಪ್ಪಂದದ ಕುರಿತ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪುನರುಚ್ಚರಿಸಿತ್ತು.
|