ಅಂತಾರಾಷ್ಟ್ರೀಯ ಅಣು ಪ್ರಾಧಿಕಾರ ಮತ್ತು ಭಾರತದ ನಡುವಿನ ಅಣು ಶಕ್ತಿ ಮತ್ತು ಅಣ್ವಸ್ತ್ರ ಸುರಕ್ಷತೆಗೆ ಸಂಬಂಧಿಸಿದಂತೆ ಮಾತುಕತೆ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಆದರೆ ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಅಣು ಒಪ್ಪಂದದ ಮೇಲೆ ರಾಜಕೀಯ ಅನಿಶ್ಚತತೆ ದೂರವಾಗುವ ಸಾಧ್ಯತೆಗಳು ಕಂಡುಬರುತ್ತಿಲ್ಲ.
ಐಎಇಎ ಮತ್ತು ಭಾರತ ನಡುವೆ ಅಣು ಶಕ್ತಿ ಸುರಕ್ಷತೆಗೆ ಸಂಬಂಧಿಸಿದಂತೆ ಒಪ್ಪಂದ ಎರ್ಪಟ್ಟರೆ ಮಾತ್ರ ಅಮೆರಿಕ ಮೂಲದ ಅಣು ತಂತ್ರಜ್ಞಾನ ಮತ್ತು ಅಣು ಶಕ್ತಿ ಇಂಧನವನ್ನು ಭಾರತ ಪಡೆಯಬಹುದು. ಈ ನಿಟ್ಟಿನಲ್ಲಿ ಭಾರತೀಯ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರು ಅಂತಾರಾಷ್ಟ್ರೀಯ ಅಣುಶಕ್ತಿ ಪ್ರಾಧಿಕಾರದೊಂದಿಗೆ ನಡೆದ ಮಾತುಕತೆಗಳನ್ನು ಅಂತಿಮಗೊಳಿಸಿದ್ದು, ಉಭಯ ಪಕ್ಷಗಳು ಶೀಘ್ರದಲ್ಲಿ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆ ಇದೆ. ಐಎಇಎಯೊಂದಿಗೆ ವಿಯೆನ್ನಾದಲ್ಲಿ ಭಾರತ ಮಾತುಕತೆ ಮುಂದುವರಿಸಿದ್ದು, ಭಾರತ ಇನ್ನೂ ಲಿಖಿತ ಒಪ್ಪಂದಕ್ಕೆ ಸಹಿ ಹಾಕುವ ಕುರಿತು ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎಂದು ವರದಿಗಳು ಹೇಳಿವೆ.
ಯುಪಿಎ ಸರಕಾರಕ್ಕೆ ಹೊರಗಿನಿಂದ ಬೆಂಬಲ ನೀಡುತ್ತಿರು ಎಡಪಕ್ಷಗಳು ನಾಗರಿಕ ಅಣು ಒಪ್ಪಂದ ಜಾರಿಗೆ ವಿರೋಧಿಸುತ್ತಿರುವ ಕಾರಣ ಐಎಇಎ ಮತ್ತು ಭಾರತದ ನಡುವೆ ಮಾಡಿಕೊಳ್ಳಲಾಗಿರುವ ಒಪ್ಪಂದಕ್ಕೆ ಭಾರತ ಇನ್ನೂ ಸಹಿಹಾಕಿಲ್ಲ. ಒಪ್ಪಂದಕ್ಕೆ ಸಹಿ ಹಾಕುವ ದುಸ್ಸಾಹಸಕ್ಕೆ ಸರಕಾರ ಕೈಹಾಕಿದಲ್ಲಿ ಬೆಂಬಲ ವಾಪಸ್ ಪಡೆಯುವುದಾಗಿ ಎಡಪಕ್ಷಗಳು ಸರಕಾರಕ್ಕೆ ಎಚ್ಚರಿಕೆ ನೀಡಿರುವುದರಿಂದ ಸರಕಾರ ಮುಂದಿನ ಕ್ರಮ ತೆಗೆದುಕೊಂಡಿಲ್ಲ. ಎಡ ಪಕ್ಷಗಳ ಬೆಂಬಲ ಇಲ್ಲದೇ ಸರಕಾರ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದು ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಸ್ಪಷ್ಟಪಡಿಸಿದ್ದಾರೆ.
ಭಾರತದ ಆಂತರಿಕ ರಾಜಕೀಯದಲ್ಲಿ ಸಿಲುಕಿರುವ ಒಪ್ಪಂದದ ಜಾರಿಯ ಗಡುವು ಮೀರುತ್ತಿದೆ.ಅಲ್ಲದೇ ಐಎಇಎಯ ಆಡಳಿತ ಮಂಡಳಿ ಮತ್ತು 45 ಅಣುಶಕ್ತಿ ಇಂಧನ ಪೂರೈಕೆದಾರರ ಸಮೂಹದ ಒಪ್ಪಿಗೆ ದೊರೆತ ನಂತರವೇ ಅಂತಿಮ ಒಪ್ಪಿಗೆಯನ್ನು ಅಮೆರಿಕದ ಸೆನೆಟ್ ನೀಡಲಿದೆ.
ಜುಲೈ ತಿಂಗಳೊಳಗೆ ಒಪ್ಪಂದವು ಅಮೆರಿಕದ ಸೆನೆಟ್‌ನ್ನು ತಲುಪದಿದ್ದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಅಣು ಒಪ್ಪಂದ ರದ್ದುಗೊಳ್ಳಲಿದೆ. ನವ್ಹಂಬರ್ ನಾಲ್ಕರಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಲಿರುವುದರಿಂದ ಒಪ್ಪಂದದ ಜಾರಿ ಮತ್ತಷ್ಟು ವಿಘ್ನಗಳನ್ನು ಎದುರಿಸಬಹುದು. ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರು ವಾಷಿಂಗ್ಟನ್ ಹಾಕಿರುವ ಗಡುವಿನ ಆಧಾರದ ಮೇಲೆ ಕೆಲಸ ಮಾಡುವುದಿಲ್ಲ ಎಂದು ಈ ಕುರಿತು ಸ್ಪಷ್ಟಪಡಿಸಿದ್ದಾರೆ.
|