ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕೆಂದು, ಮಾಜಿ ಉಪಪ್ರಧಾನಿ ಎಲ್. ಆಡ್ವಾಣಿ, ಹಾಲಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಬಹಿರಂಗವಾಗಿ ಒತ್ತಾಯಿಸುವಲ್ಲಿಂದ ಆರಂಭಗೊಂಡ ಭಾರತ ರತ್ನ ಶಿಫಾರಸು ಅಭಿಯಾನವು, ಕೇಂದ್ರ ಸರಕಾರ ಈ ಬಾರಿ ಯಾರಿಗೂ ಭಾರತ ರತ್ನ ಇಲ್ಲ ಎಂದು ಘೋಷಿಸುವ ತನಕ ಮುಂದುವರಿದಿತ್ತು.
ಈ ಶಿಫಾರಸು ಓಟದಲ್ಲಿ ಸರ್ವಪಕ್ಷಗಳು ನಾಮುಂದು ತಾಮುಂದು ಎಂಬಂತೆ, ತಂತಮ್ಮ ಪಕ್ಷಗಳ ನಾಯಕರ, ಮುಖಂಡರ ಹೆಸರುಗಳನ್ನು ಶಿಫಾರಸು ಮಾಡಿದ್ದೇ ಮಾಡಿದ್ದು. ಹೀಗೆ ಒಟ್ಟು ಬಂದ ಶಿಫಾರಸುಗಳಿಗೂ ತೊಂಬತ್ತರ ತುಮುಲ! ಶತಕದಿಂದ ವಂಚನೆ! ಸರಕಾರ ಸ್ವೀಕರಿಸಿದ ಒಟ್ಟು ಶಿಫಾರಸುಗಳ ಸಂಖ್ಯೆ ಶತಕಕ್ಕೆ ಒಂದು ಕಮ್ಮಿ. ಅಂದರೆ 99.
ಮಹಾತ್ಮಾ ಗಾಂಧಿ, ಸೋನಿಯಾ ಗಾಂಧಿ, ವಿ.ಪಿ.ಸಿಂಗ್, ಲಾಲೂಪ್ರಸಾದ್ ಯಾದವ್, ಮುಲಾಯಂ ಸಿಂಗ್ ಯಾದವ್, ಕರುಣಾನಿಧಿಯವರ ಹೆಸರುಗಳು ಶಿಫಾರಸು ಪಟ್ಟಿಯಲ್ಲಿದ್ದವು. ದಿವಂಗತ ನಾಯಕರುಗಳಾದ ಬಾಬೂ ಜಗಜೀವನ ರಾಮ್, ಬನ್ಸಿ ಲಾಲ್, ಚರಣ್ ಸಿಂಗ್, ಪಿ.ವಿ.ನರಸಿಂಹ ರಾವ್, ಕಾನ್ಶೀ ರಾಮ್, ಎನ್.ಟಿ.ರಾಮರಾವ್ ಮತ್ತು ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ಅವರುಗಳ ಹೆಸರೂ ಭಾರತ ರತ್ನ ಶಿಫಾರಸು ಸ್ಫರ್ಧೆಯಲ್ಲಿತ್ತು.
ಈ ಶತಕ ವಂಚಿತ ಶಿಫಾರಸು ಪಟ್ಟಿಯ ವಿಚಾರವನ್ನು ಗೃಹ ಇಲಾಖೆಯ ರಾಜ್ಯ ಸಚಿವ ಮಾಣಿಕ್‌ರಾವ್ ಎಚ್ ಗವಿತ್ ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ತಿಳಿಸಿದರು. ಸರಕಾರವು 2005ರಲ್ಲಿ 70ಶಿಫಾರಸುಗಳನ್ನು ಪಡೆದಿತ್ತು, ಅದರ ನಂತರದ ವರ್ಷದಲ್ಲಿ 65 ಶಿಫಾರಸುಗಳು ಬಂದಿದ್ದವಂತೆ. ಇದುವರೆಗೆ ಸರಕಾರ 40 ಮಂದಿಗೆ ಈ ಪರಮೋಚ್ಛಪ್ರಶಸ್ತಿ ನೀಡಿ ಗೌರವಿಸಿದೆ.
ಹ್ಯಾಟ್ರಿಕ್ ಕಾಂಗ್ರೆಸ್ ವರಿಷ್ಠೆ ಸೋನಿಯಾ ಹೆಸರನ್ನು ಸತತ ಮೂರುವರ್ಷಗಳು ಶಿಫಾರಸು ಮಾಡಲಾಗಿದೆ. ಜಗಜೀವನ್ ರಾಮ್, ಕ್ಷೀರ ಕ್ರಾಂತಿಯ ವರ್ಗೀಸ್ ಕುರಿಯನ್, ಹಸಿರು ಕ್ರಾಂತಿಯ ಹರಿಕಾರ ಸ್ವಾಮಿನಾಥನ್, ಯೋಗ ಗುರು ಬಾಬ ರಾಮ್‌ದೇವ್ ಅವರ ಹೆಸರುಗಳ ಶಿಫಾರಸುಗಳೂ ಹ್ಯಾಟ್ರಿಕ್ ಸಾಧಿಸಿವೆ.
ಗಾಂಧಿಜಿ ಹಿನ್ನಡೆ ರಾಷ್ಟ್ರಪ್ರಶಸ್ತಿ ಶಿಫಾರಸು ವಿಚಾರದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಭಾರತ ಸ್ವಾತಂತ್ರ್ಯ ಸಂಗ್ರಾಮದ ಮೇರು ವ್ಯಕ್ತಿತ್ವದ ರಾಷ್ಟ್ರಪಿತ ಮಹಾತ್ಮಗಾಂಧಿ ಅವರನ್ನು ಹಿಂದಿಕ್ಕಿದ್ದಾರೆ. ಗಾಂಧಿಜಿ ಹೆಸರನ್ನು ಇದುವರೆಗೆ ಎರಡು ಬಾರಿ ಮಾತ್ರ ಶಿಫಾರಸು ಮಾಡಲಾಗಿದೆ. 2006 ಹಾಗೂ 2007ರಲ್ಲಿ ಗಾಂಧಿಜಿಯವರಿಗೆ ಭಾರತ ರತ್ನ ನೀಡಬೇಕು ಒತ್ತಾಯಿಸಲಾಗಿದೆ. ಬಿಜು ಪಟ್ನಾಯಕ್. ಕಲಾವಿದ ಎಂ.ಎಫ್.ಹುಸೇನ್, ನ್ಯಾಯಮೂರ್ತಿ(ನಿವೃತ್ತ) ವಿ.ಆರ್ ಕೃಷ್ಣ ಅಯ್ಯರ್, ವೀರ್ ಸಾವರ್ಕರ್ ಕರುಣಾನಿಧಿ, ಜಗಜೀವನ್ ರಾಮ್ ಇವರುಗಳು ಬಹುಶಿಫಾರಸು ಪಡೆದಿದ್ದಾರೆ.
ಈ ಪ್ರಶಸ್ತಿಗೆ ಶಿಫಾರಸುಗೊಂಡಿರುವ ಏಕೈಕ ದಂಪತಿಗಳೆಂದರೆ, ಸಮಾಜ ಸುಧಾರಕ ಜ್ಯೋತಿಬಾ ಫುಲೆ ಹಾಗೂ ಆವರ ಪತ್ನಿ ಸಾವಿತ್ರಿಬಾಯ್.
ಶಿಫಾರಸು ಓಟದಲ್ಲಿರುವ ಇತರ 'ಸ್ಫರ್ಧಿ'ಗಳೆಂದರೆ, ಕ್ರಾಂತಿಕಾರಿ ಭಗತ್ ಸಿಂಗ್, ಸಂಗೀತಗಾರರಾದ ಭೀಮಸೇನ್ ಜೋಶಿ, ಭೂಪೇನ್ ಹಜಾರಿಕ, ಮೊಹಮ್ಮದ್ ರಫಿ ಮತ್ತು ಬಾಲಮುರಳಿ ಕೃಷ್ಣ, ನಟರಾದ ದಿಲಿಪ್ ಕುಮಾರ್, ರಾಜ್ ಕುಮಾರ್, ನುರಿತ ಪತ್ರಕರ್ತ ಖುಷ್ವಂತ್ ಸಿಂಗ್, ಗಗನಯಾತ್ರಿ ಸುನಿತಾ ವಿಲಿಯಮ್ಸ್, ಹಾಗೂ ಉದ್ಯಮಿ ರತನ್ ಟಾಟಾ!
|