ದಕ್ಷಿಣ ಭಾರತೀಯ ಚಲನಚಿತ್ರ ರಂಗಕ್ಕೆ ಸಂಬಂಧಪಟ್ಟವರು ಎಂದು ಹೇಳಿಕೊಂಡು ಅಮೆರಿಕದ ವೀಸಾಗಳಿಗೆ ಅರ್ಜಿ ಸಲ್ಲಿಸಿದ್ದ ಸುಮಾರು 200 ಜನರು ನಕಲಿ ದಾಖಲೆ ಪತ್ರಗಳನ್ನು ಸಲ್ಲಿಸಿರುವುದು ಪತ್ತೆಯಾಗಿದ್ದು, ಇದರ ಹಿಂದೆ ಬೃಹತ್ ಜಾಲವೇ ಇರುವ ಸಾಧ್ಯತೆಗಳಿವೆ.
ಚೆನ್ನೈನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯ ವಂಚನೆ ನಿರೋಧಕ ದಳವು ಈ ಜಾಲವನ್ನು ಭೇದಿಸಿದ್ದು, ನಕಲಿ ದಾಖಲೆ ಪತ್ರ ಸಲ್ಲಿಸಿದ ಸಿನಿಮಾ ರಂಗದ ಸುಮಾರು 200 ಮಂದಿಗೆ ಶಾಶ್ವತ ವೀಸಾ ನಿರಾಕರಿಸುವ ಸಾಧ್ಯತೆಗಳು ದಟ್ಟವಾಗಿವೆ.
ರಾಯಭಾರಿ ಕಚೇರಿ ಅಕ್ರಮ ಪತ್ತೆ ದಳವು ಅಕ್ರಮ ಜಾಲವನ್ನು ಭೇದಿಸುವಲ್ಲಿ ಸಫಲವಾಗಿದ್ದು, ಆಕ್ರಮ ಜಾಲದಲ್ಲಿ ಸಿನಿಮಾ ನಟರು,ನಿರ್ದೇಶಕರುಗಳು ತಮ್ಮ ಹೆಸರುಗಳನ್ನು ಬಳಸಿಕೊಂಡು ಅಕ್ರಮವಾಗಿ ಅಮೆರಿಕ ಪ್ರವೇಶಿಸ ಬಯಸುವವರಿಗೆ ಸಹಾಯ ಮಾಡಿದ್ದು, ಪ್ರತಿಯಾಗಿ ಅಂದಾಜು 5 ಲಕ್ಷ ರೂಗಳನ್ನು ತಲಾ ಅರ್ಜಿದಾರರಿಂದ ಪಡೆದಿರಬಹುದಾದ ಸಾಧ್ಯತೆ ಇದೆ ಎಂದು ಹೇಳಿದೆ. ಈ ರೀತಿ ಆಕ್ರಮವಾಗಿ ಅಮೆರಿಕವನ್ನು ಪ್ರವೇಶಿಸಿರುವರ ಮಾಹಿತಿಯನ್ನು ಅಮೆರಿಕದಲ್ಲಿ ಇರುವ ಕಾನೂನು ಜಾರಿ ವಿಭಾಗಕ್ಕೆ ರವಾನಿಸಲಾಗಿದೆ. ಅಮೆರಿಕದ ಕಾನೂನುಗಳ ಪ್ರಕಾರ ವೀಸಾ ಅರ್ಜಿದಾರರ ಮಾಹಿತಿ ಬಹಿರಂಗ ಪಡಿಸುವಂತಿಲ್ಲ ಎಂದು ರಾಯಭಾರಿ ಕಚೇರಿಯು ಪ್ರಕಟಣೆಯಲ್ಲಿ ಹೇಳಿದೆ.
ಕಾನೂನು ಬದ್ಧವಾಗಿ ಅಮೆರಿಕ ಪ್ರವಾಸ ಕೈಗೊಳ್ಳುವವರನ್ನು ರಾಯಭಾರಿ ಕಚೇರಿ ಸ್ವಾಗತಿಸುತ್ತದೆ. ಅಕ್ರಮವಾಗಿ ವೀಸಾ ಪಡೆಯುವವರನ್ನು ಅಮೆರಿಕ ಮತ್ತು ಭಾರತದಲ್ಲಿ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಅದು ಎಚ್ಚರಿಕೆ ನೀಡಿದೆ. ಕಾನ್ಸುಲ್ ಜನರಲ್ ಡೆವಿಡ್ ಹಾಪ್ಪರ್ ಅವರ ಪ್ರಕಾರ, ರಾಯಭಾರಿ ಕಚೇರಿ ತೆಗೆದುಕೊಂಡಿರುವ ಕ್ರಮವು ದಕ್ಷಿಣ ಭಾರತೀಯ ಚಲನ ಚಿತ್ರ ರಂಗವನ್ನು ಅವಮಾನಿಸುವಂತಹದು ಅಲ್ಲ. ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಚಲನ ಚಿತ್ರ ರಂಗವನ್ನು ರಾಯಭಾರಿ ಕಚೇರಿಯು ಗೌರವಿಸುತ್ತದೆ. ಅಮೆರಿಕ ಸೇರಿದಂತೆ ಇತರ ದೇಶಗಳೊಂದಿಗೆ ಇರುವ ಚಲನಚಿತ್ರ ರಂಗಕ್ಕೆ ಸಂಬಂಧಿಸಿದಂತೆ ಇರುವ ವ್ಯವಹಾರವನ್ನು ರಾಯಭಾರಿ ಕಚೇರಿ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದ್ದಾರೆ.
|