ಚುನಾವಣೆಯು ನಿಗದಿಯಂತೆಯೇ ನಡೆಯಲಿದೆ ಎಂದು ಹೇಳಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು ಅವಧಿಗಿಂತ ಮುಂಚಿನ ಚುನಾವಣೆಯ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.
ವಾರಾಣಾಸಿಯಲ್ಲಿ ಶುಕ್ರವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಸದ್ಯವೇ ಚುನಾವಣೆ ಎದುರಾಗಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡುತ್ತಿದ್ದರು. ಈ ವರ್ಷದಲ್ಲಿಯಂತೂ ಚುನಾವಣೆ ಸಾಧ್ಯವಿಲ್ಲ ಎಂದು ಸಿಂಗ್ ಸ್ಪಷ್ಟಪಡಿಸಿದರು.
ಈ ವರ್ಷದ ಬಜೆಟ್ಟಿನಲ್ಲಿ ರೈತಸಾಲ ಮನ್ನಾ ಮಾಡಿರುವುದು ಮುಂದಿನ ಚುನಾವಣೆಗಳನ್ನು ಗಮನದಲ್ಲಿರಿಸಿಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಇದು ಜನಪ್ರಿಯ ನಿರ್ಧಾರವಲ್ಲ. ಬಡ ರೈತರ ಪರಿಸ್ಥಿತಿಯನ್ನು ಗಮನದಲ್ಲಿರಿಸಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಮರುನುಡಿದರು.
ಉತ್ತರಪ್ರದೇಶವನ್ನು ಚಿಕ್ಕರಾಷ್ಟ್ರಗಳಾಗಿಸಲು ಮಾಯಾವತಿ ಸರಕಾರ ಒಲವು ತೋರುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ರಾಜ್ಯ ಸರಕಾರದಿಂದ ಪ್ರಸ್ತಾಪವಿದ್ದರೆ ಇದನ್ನು ಪರಿಗಣಿಸಲಾಗುವುದು ಎಂದು ನುಡಿದರು.
ಕೇಂದ್ರ ಸರಕಾರದ ಯೋಜನೆಗಳನ್ನು ರಾಜ್ಯದಲ್ಲಿ ಸೂಕ್ತವಾಗಿ ಜಾರಿಯಾಗುವಂತೆ ನೋಡಿಕೊಳ್ಳುವುದು ರಾಜ್ಯಗಳ ಜವಾಬ್ದಾರಿ ಎಂದು ಹೇಳಿದ ಪ್ರಧಾನಿ, ಯೋಜನೆಗಳು ಸರಿಯಾಗಿ ಜಾರಿಯಾಗದಿದ್ದಲ್ಲಿ ಕೇಂದ್ರದ ಮೇಲೆ ಗೂಬೆ ಕೂರಿಸುವುದು ಸೂಕ್ತವಲ್ಲ ಎಂದು ನುಡಿದರು.
|