ಗೋಧ್ರಾದಲ್ಲಿನ 2002ರ ಕೋಮುಗಲಭೆಯ ಗಾಯಗಳು ಒಣಗಿದ್ದು, ತನ್ನ ರಾಜ್ಯದಲ್ಲಿನ ಮುಸ್ಲಿಮರು ಚೆನ್ನಾಗಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
"ನನ್ನ ರಾಜ್ಯದ ಜನತೆಯ ಗಾಯಗಳು ಮಾಗಿವೆ. ಅಭಿವೃದ್ಧಿಯ ಫಲಗಳೊಂದಿಗೆ ಅವರು ಶಾಂತಿಯಿಂದ ಜೀವಿಸುತ್ತಿದ್ದಾರೆ" ಎಂದು ಮೋದಿ ಹೇಳಿದ್ದಾರೆ.
ಇಂಡಿಯಾ ಟುಡೇ ಸಮಾವೇಶದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ದಿಗ್ವಿಜಯ್ ಸಿಂಗ್, ಫಾರೂಕ್ ಅಬ್ದುಲ್ಲ ಅವರೊಂದಿಗೆ ಭಾಗವಹಿಸಿದ್ದ ಮೋದಿ, ರಾಜ್ಯದಲ್ಲಿ ಕೋಮುಸೌಹಾರ್ದ ಮೂಡಿಸಲು ಅಭಿವೃದ್ಧಿಯನ್ನು ಹೇಗೆ ಬಳಸಿಕೊಳ್ಳುವಿರಿ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಮಾತನಾಡುತ್ತಿದ್ದರು.
ಆದರೆ, ಈ ವಿಷಯವನ್ನು ಆಗಾಗ ಎತ್ತುತ್ತಿರುವವರ ಗಾಯವನ್ನು ಮಾಯುವಂತೆ ಮಾಡಲು ಸಾಧ್ಯವಾಗಲಿಲ್ಲ ಎಂದು ನುಡಿದ ಅವರು, "ಇದು ಅಂತಹವರ ಜೀವನೋಪಾಯವಾಗಿದೆ" ಎಂದು ವ್ಯಂಗ್ಯವಾಡಿದರು.
ಈ ವೇಳೆ ಮಧ್ಯಪ್ರವೇಶಿಸಿದ ಅಬ್ದುಲ್ಲಾ ಅವರು ಇಂತಹ ವಿಷಯಗಳನ್ನು ಪದೇಪದೇ ಕೆದಕುವುದರಿಂದ ಯುವುದೇ ಪ್ರಯೋಜನವಿಲ್ಲ, ಹೀಗೆ ಮಾಡುವುರಿಂದ ಅಂತಹ ಗಾಯಗಳು ಹಸಿಯಾಗಿರುತ್ತದೆ, ಈ ವಿಷಯವನ್ನು ಮರೆಯುವ ಕಾಲ ಬಂದಿದೆ ಮತ್ತು ಇಂತಹವುಗಳು ಮರುಕಳಿಸಬಾರದು ಎಂದು ನುಡಿದರು.
ಚುನಾವಣೆಯಲ್ಲಿ ಯಾವುದೇ ಕ್ಷೇತ್ರಕ್ಕೂ ಒಬ್ಬೇ ಒಬ್ಬ ಮುಸ್ಲಿಂಗೆ ಯಾಕೆ ಟಿಕೆಟ್ ನೀಡಿಲ್ಲ ಎಂಬುದಾಗಿ ದಿಗ್ವಿಜಯ ಸಿಂಗ್ ಉದ್ದೇಶಿಸಿ ಕೇಳಿದ ಪ್ರಶ್ನೆಗೆ ಮಧ್ಯಪ್ರವೇಶಿಸಿದ ಮೋದಿ, ಹಿಂದಿನ ಚುನಾವಣೆಗಳಿಗಿಂತ ಇತ್ತೀಚೆಗೆ ಕಾಂಗ್ರೆಸ್ ಯಾಕೆ ಕಮ್ಮಿ ಸಂಖ್ಯೆಯ ಮುಸ್ಲಿಮರನ್ನು ಕಣಕ್ಕಿಳಿಸುತ್ತಿದೆ ಎಂಬ ಮರುಪ್ರಶ್ನೆ ಎಸೆದರು. ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಬಿಜೆಪಿಯು ಹಲವು ಮುಸ್ಲಿಂ ಸದಸ್ಯರನ್ನು ಹೊಂದಿದ್ದು, ಅವರು ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದು ಮೋದಿ ಸಮರ್ಥಿಸಿಕೊಂಡರು.
2004ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸೋಲಿಗೆ ಕಾರಣವೇನೆಂದು ವಿಶ್ಲೇಷಿಸಬೇಕು ಎಂದು ಅಬ್ದುಲ್ಲಾ ಮೋದಿಯವರನ್ನು ಪ್ರಶ್ನಿಸಿದಾಗ, "ನನ್ನ ವ್ಯಾಪ್ತಿಯಾದ ಗುಜರಾತಿನಿಂದ ಆಚೆಹೋಗುವುದು ಸೂಕ್ತವಲ್ಲ" ಎಂದು ಮೋದಿ ನುಡಿದರು.
|