ಪಾಕಿಸ್ತಾನ ಸೆರೆಯಲ್ಲಿರುವ ಭಾರತದ ಪ್ರಜೆ ಸರಬ್‌ಜಿತ್ ಸಿಂಗ್‌ನನ್ನು ಏಪ್ರಿಲ್ ಒಂದರಂದು ಗಲ್ಲಿಗೇರಿಸಲಾಗುವುದು ಎಂಬ ವರದಿಗಳ ಹಿನ್ನೆಲೆಯಲ್ಲಿ, ಜನತೆಯ ಭಾವನೆಗಳನ್ನು ಗಮನದಲ್ಲಿಸಿಕೊಂಡು ಇಸ್ಲಾಮಾಬಾದ್ ಈ ವಿಚಾರದಲ್ಲಿ ಮೆದು ಧೋರಣೆ ತಳೆಯಬಹುದು ಎಂಬ ಆಶಾಭಾವನೆಯನ್ನು ಭಾರತ ಇಂದು ವ್ಯಕ್ತಪಡಿಸಿದೆ.
ಈ ಪ್ರಕರಣದಲ್ಲಿ ಭಾರವು 'ಸೀಮಿತ ಆಯ್ಕೆಗಳನ್ನು' ಮಾತ್ರ ಹೊಂದಿದೆ ಎಂದು ನುಡಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಆನಂದ ಶರ್ಮಾ, ಸಿಂಗ್ ಕುರಿತು ಮೆದು ಧೋರಣೆಯನ್ನು ತಳೆಯುವಂತೆ ವಿನಂತಿಸುವುದರ ಹೊರತಾಗಿ ಭಾರತವು ಮತ್ತೇನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
"ಸರಬ್‌ಜಿತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತವು ಈ ಹಿಂದೆಯೇ ಭಾರತೀಯರ ಭಾವನೆಗಳ ಕುರಿತು ಸಂದೇಶ ರವಾನಿಸಿ, ಕ್ಷಮಾದಾನವನ್ನು ಕೋರಿದೆ. ಮಾನವೀಯ ಅಂಶಗಳ ಪರಿಗಣನೆಯಿಂದ ಪಾಕ್ ಆತನ ಕುರಿತು ಮೆದು ಧೋರಣೆ ತಳೆಯಬಹುದು ಎಂಬ ವಿಶ್ವಾಸ ಹೊಂದಿರುವುದಾಗಿ ಅವರು ನುಡಿದರು. ಇಲ್ಲಿ ನಡೆದ ಸಮಾರಂಭವೊಂದರ ಪಾರ್ಶ್ವದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಪಾಕಿಸ್ತಾನದಲ್ಲಿ ಬಾಂಬ್ ಸ್ಫೋಟಗಳನ್ನು ನಡೆಸಿರುವ ಆರೋಪದ ಮೇಲೆ ಮರಣದಂಡನೆಗೀಡಾಗಿರುವ ಸಿಂಗ್‌ಗೆ ಈಗಾಗಲೇ 'ಕಪ್ಪು ಆಜ್ಞೆ' ನೀಡಿದ್ದು ಆತನನ್ನು ಎಪ್ರಿಲ್ ಒಂದರಂದು ಗಲ್ಲಿಗೇರಿಸುವ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಸಚಿವರ ಈ ಪ್ರತಿಕ್ರಿಯೆ ಹೊರಬಿದ್ದಿದೆ.
ಸರಬ್‌ಜಿತ್ ಗಲ್ಲಿಗೇರಿಸುವ ಕುರಿತಂತೆ ಪಾಕಿಸ್ತಾನ ಸರಕಾರದಿಂದ ಭಾರತ ಸರಕಾರಕ್ಕೆ ಯಾವುದಾದರೂ ಮಾಹಿತಿ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಔಪಚಾರಿಕವಾಗಿ ಸರಕಾರಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ನುಡಿದರು. ಮಾಧ್ಯಮ ವರದಿಗಳ ಮುಖಾಂತರವೇ ತಾನು ಈ ವಿಚಾರವನ್ನು ತಿಳಿದುಕೊಂಡಿರುವುದಾಗಿ ತಿಳಿಸಿದ ಅವರು, ಇದೊಂದು ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಉದಾರ ಧೋರಣೆ ತಳೆಯುವಂತೆ ಪಾಕ್ ಸರಕಾರವನ್ನು ವಿನಂತಿಸಲು ಮಾತ್ರಸಾಧ್ಯ ಎಂದು ನುಡಿದರು.
ಉಭಯ ರಾಷ್ಟ್ರಗಳಲ್ಲಿರುವ ಶಿಕ್ಷೆ ಮುಗಿಸಿದ ಕೈದಿಗಳ ಬಿಡುಗಡೆಯ ಖಚಿತತೆಗಾಗಿ ಸಮಿತಿಯೊಂದನ್ನು ನೇಮಿಸುವುದು ನಮ್ಮ ಪ್ರಯತ್ನವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
|