ಶಿವಾನಿ ಭಟ್ನಾಗರ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಹರಿಯಾಣ ಐಪಿಎಸ್ ಪೊಲೀಸ್ ಅಧಿಕಾರಿ ರವಿಕಾಂತ ಶರ್ಮಾ ಸೇರಿದಂತೆ ಇತರ ಮೂವರನ್ನು ದೆಹಲಿಯ ವಿಶೇಷ ನ್ಯಾಯಾಲಯ ಅಪರಾಧಿಗಳು ಎಂದು ಘೋಷಿಸಿದೆ.
ನ್ಯಾಯಮೂರ್ತಿ ರಾಜೇಂದ್ರ ಶಾಸ್ತ್ರಿ ಅವರು ಕೈಗೆತ್ತಿಕೊಂಡ ಪ್ರಕರಣದ ವಿಚಾರಣೆಯಲ್ಲಿ, ಆರೋಪಿ ಸ್ಥಾನದಲ್ಲಿ ನಿಂತಿದ್ದ ವೇದಪ್ರಕಾಶ್ ಶರ್ಮಾ ಮತ್ತು ವೇದಪ್ರಕಾಶ ಅಲಿಯಾಸ ಕಾಲೂನನ್ನು ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣದಿಂದ ಆರೋಪದಿಂದ ನ್ಯಾಯಾಲಯ ನಿರಪರಾಧಿಗಳು ಎಂದು ತೀರ್ಪಿತ್ತಿದ್ದು, ಅಪರಾಧ ಸಾಬೀತಾಗಿರುವ ಆರೋಪಿಗಳಿಗೆ ಮಾರ್ಚ್ 20 ರಂದು ಶಿಕ್ಷೆ ಪ್ರಕಟಿಸಲಾಗುವುದು ಎಂದು ಹೇಳಿದೆ. ಪ್ರಕರಣದ ಹಿನ್ನಲೆ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ತನಿಖಾ ವರದಿಯಾರ್ತಿಯಾಗಿ ಕೆಲಸ ಮಾಡುತ್ತಿದ್ದ ಶಿವಾನಿ ಭಟ್ನಾಗರ್, ಆಗ ಪ್ರಧಾನಿ ಮಂತ್ರಿ ಕಾರ್ಯಾಲಯದಲ್ಲಿ ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಐಪಿಎಸ್ ಅಧಿಕಾರಿ ರವಿಕಾಂತ್ ಶರ್ಮಾನೊಂದಿಗೆ ಸಂಬಂಧ ಇರಿಸಿಕೊಂಡಿದ್ದಳು. ಶರ್ಮಾ ತನಿಖಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕೆಲವೊಂದು ಮಹತ್ವದ ದಾಖಲೆಗಳನ್ನು ಶಿವಾನಿಗೆ ನೀಡಿದ್ದನು ಎಂದು ಆರೋಪಿಸಲಾಗಿತ್ತು.
ಮಹತ್ವದ ದಾಖಲೆಗಳನ್ನು ಮರಳಿ ಪಡೆಯುವುದಕ್ಕೆ ಮತ್ತು ತನ್ನನ್ನು ಮದುವೆಯಾಗುವಂತೆ ಶಿವಾನಿ ಪದೇ ಪದೇ ಒತ್ತಾಯಿಸಿ ಬೆದರಿಸುತ್ತಿರುವುದನ್ನು ಸಹಿಸಲಾಗದ ಶರ್ಮಾ ಪ್ರದೀಪ್ ಶರ್ಮಾ ಎಂಬುವವನಿಗೆ ಮೂರು ಲಕ್ಷ ರೂಗಳ ಸುಪಾರಿ ನೀಡಿ ಶಿವಾನಿಯ ಹತ್ಯೆಯಾಗುವಂತೆ ನೋಡಿಕೊಂಡ ಆರೋಪ ಪ್ರಕರಣದ ಸೂತ್ರದಾರಿ ಆರ್ ಕೆ ಶರ್ಮಾ ಮೇಲಿದೆ.
ಸುಮಾರು ಎರಡು ತಿಂಗಳುಗಳ ಕಾಲ ಪೊಲೀಸರಿಗೆ ಶರಣಾಗದೇ ತಲೆ ತಪ್ಪಿಸಿಕೊಂಡಿದ್ದ ಹರಿಯಾಣದ ಮಾಜಿ ಇನ್ಸಪೆಕ್ಟರ್ ಜನರಲ್ ಆಪ್ ಪೊಲೀಸ್ ಅಂತಿಮವಾಗಿ ಪೊಲೀಸರಿಗೆ ಶರಣಾಗಿದ್ದನು.
ಜುಲೈ 1997ರಿಂದ ಎಪ್ರಿಲ್ 1998ರವರೆಗೆ ಪ್ರಧಾನ ಮಂತ್ರಿಗಳ ಕಾರ್ಯಾಲಯದಲ್ಲಿ ವಿಶೇಷಾಧಿಕಾರಿಯಾಗಿದ್ದ ಶರ್ಮಾ ಕೆಲ ಮಹತ್ವದ ದಾಖಲೆಗಳನ್ನು ಹತ್ಯೆಯಾದ ಪತ್ರಕರ್ತೆಗೆ ನೀಡಿದ್ದನು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ತಮ್ಮ ವಾದದಲ್ಲಿ ಆಪಾದಿಸಿದ್ದು. ಗೌಪ್ಯ ದಾಖಲೆಗಳನ್ನು ಪಡೆಯುವುದಕ್ಕೆ ಆಪಾದಿತ ಶರ್ಮಾ ಶ್ರೀ ಭಗವಾನ್ ಎಂಬ ವ್ಯಕ್ತಿಯ ಸಹಾಯ ಪಡೆದುಕೊಂಡಿದ್ದನು. ಶಿವಾನಿ ಭಟ್ನಾಗರ್‌ರನ್ನು ಮೂರು ಲಕ್ಷ ಸುಪಾರಿಗೆ ಕೊಲೆ ಮಾಡಿದ ಪ್ರದೀಪ್ ಶರ್ಮಾನನ್ನು ನ್ಯಾಯಾಲಯ ಆರೋಪಿ ಎಂದು ಘೋಷಿಸಿದೆ.
|