ಅಪ್ರಾಪ್ತ ವಯಸ್ಸಿನಲ್ಲಿ ಶಸ್ತ್ರಾಸ್ತ್ರ ಪರವಾನಗಿ ಹೊಂದಿರುವ ಆಪಾದನೆಯನ್ನು ಬಾಲಿವುಡ್ ನಟಿ ಸೋಹಾ ಅಲಿ ಖಾನ್ ಎದುರಿಸುತ್ತಿದ್ದು, ಶಸ್ತ್ರಾಸ್ತ್ರ ಕಾಯಿದೆಯ ನಿಯಮ ಉಲ್ಲಂಘನೆಯಾಗಿರುವ ಕಾರಣ ಪರವಾನಗಿಯನ್ನು ಏಕೆ ರದ್ದು ಮಾಡಬಾರದು ಎಂದು ಜಿಲ್ಲಾಡಳಿತ ನೋಟಿಸ್ ಮೂಲಕ ಕೇಳಿದೆ.
ಪಾಯಿಂಟ್ 12 ಬೋರ್ ರೈಫಲ್ ಹೊಂದಿರುವ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಸೋಹಾ ತಂದೆ ಮನ್ಸೂರ್ ಅಲಿಖಾನ್ ಅವರು ಹರಿಯಾಣದ ಜಜ್ಜಾರ್ ಜಿಲ್ಲೆಯಲ್ಲಿ ಕೃಷ್ಣ ಮೃಗ ಬೇಟೆಯಾಡಿದ್ದು ಶಸ್ತ್ರಾಸ್ತ್ರದ ದುರುಪಯೋಗ ಮಾಡಿಕೊಂಡಿಂತಾಗಿದೆ ಎಂದು ಜಿಲ್ಲಾಡಳಿತ ನೋಟಿಸ್‌ನಲ್ಲಿ ಹೇಳಿದೆ.
ಗುರಗಾಂವ್ ಜಿಲ್ಲಾಡಳಿತವು ಸೋಹಾ ಸುಲ್ತಾನ್ ಹೆಸರಿನಲ್ಲಿ ನೋಟಿಸ್ ಜಾರಿ ಮಾಡಿದ್ದು, 15 ದಿನಗಳಲ್ಲಿ ಉತ್ತರಿಸಬೇಕು ಎಂದು ಕೇಳಿಕೊಂಡಿದೆ. ಅಲ್ಲದೇ ಶಸ್ತ್ರಾಸ್ತ್ರ ಪರವಾನಗಿಯ ಮೂಲ ಪ್ರತಿಗಳು ಕಾಣೆಯಾಗಿರುವ ಸಂಬಂಧ ಪ್ರತ್ಯೇಕ ತನಿಖೆಗೆ ಆದೇಶಿಸಿದೆ.
ನವ್ಹಂಬರ್ 5, 1995ರಂದು ಸೋಹಾ ಅಲಿಖಾನ್ ಅವರಿಗೆ ಶಸ್ತ್ರಾಸ್ತ್ರ ಪರವಾನಗಿಯನ್ನು ನೀಡಲಾಗಿತ್ತು. ಆ ಸಂದರ್ಭದಲ್ಲಿ ಸೋಹಾ ಅಲಿಗೆ 18 ವರ್ಷ ವಯಸ್ಸಾಗಿತ್ತು. 1959ರ ಶಸ್ತ್ರಾಸ್ತ್ರ ಕಾಯಿದೆಯಡಿಯಲ್ಲಿ ಶಸ್ತ್ರಾಸ್ತ್ರ ಹೊಂದಲು ಭಾರತೀಯ ನಾಗರಿಕನಿಗೆ 21 ವರ್ಷ ವಯಸ್ಸಾಗಿರಬೇಕು ಎಂದು ಜಿಲ್ಲಾಧಿಕಾರಿ ರಾಕೇಶ್ ಗುಪ್ತಾ ಮಾಹಿತಿ ನೀಡಿದ್ದಾರೆ.
ಜೂನ್ 5, 2005ರಲ್ಲಿ ಜಜ್ಜಾರ್ ಪೊಲೀಸ್ ಠಾಣೆಯಲ್ಲಿ ಮನ್ಸೂರ್ ಅಲಿ ಖಾನ್ ಪಟೌಡಿ ವಿರುದ್ಧ ಶಸ್ತ್ರಾಸ್ತ್ರ ದುರುಪಯೋಗ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
|