ದ್ವಿಪಕ್ಷೀಯ ಮಾತುಕತೆಗಳು ಉಭಯ ರಾಷ್ಟ್ರಗಳ ನಡುವೆ ಮುಂದುವರಿದಿದ್ದರೂ ಕೂಡ ಪಾಕಿಸ್ತಾನದ ಗೂಢಚಾರ ಸಂಸ್ಥೆ ಐಎಸ್ಐ ಲಷ್ಕರ್ ಏ ತೊಯ್ಬಾ ಮತ್ತು ಜೈಷ್ ಎ ಮಹ್ಮದ್ ಉಗ್ರ ಸಂಘಟನೆಗಳಿಗೆ ನೀಡುತ್ತಿರುವ ಬೆಂಬಲದ ನೀತಿಯಲ್ಲಿ ಬದಲಾವಣೆಯಾಗಿಲ್ಲ. ಪರಿಣಾಮವಾಗಿ ಭಾರತದ ಮೇಲೆ ಉಗ್ರರ ದಾಳಿ ಅಬಾಧಿತವಾಗಿ ಮುಂದುವರಿಯಲಿದೆ ಎಂದು ರಾಷ್ಟ್ರೀಯ ಸುರಕ್ಷಾ ಸಲಹಾಗಾರ ಎಂ ಕೆ ನಾರಾಯಣನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ- ಆಫಘಾನಿಸ್ತಾನ ಗಡಿ ಪ್ರದೇಶದಲ್ಲಿ ಲಷ್ಕರ್ ಮತ್ತು ತೊಯ್ಬಾ ಸಂಘಟನೆಗಳು ಉಗ್ರರಿಗೆ ನೀಡುತ್ತಿರುವ ತರಬೇತಿ ನಿರಾತಂಕವಾಗಿ ಸಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದಿಂದ ಆಫ್ಘನ್ ಗಡಿಗೆ ಉಗ್ರರ ತರಬೇತಿ ತಾಣಗಳು ವರ್ಗಾವಣೆಯಾಗಿವೆ. ಭಾರತದ ವಿರುದ್ಧ ಪಾಕಿಸ್ತಾನದ ಗೂಢಚರ ಸಂಸ್ಥೆ ಹಮ್ಮಿಕೊಂಡಿರುವ ನೀತಿಯಲ್ಲಿ ಭವಿಷ್ಯದಲ್ಲಿ ಬದಲಾವಣೆಯಾಗುವ ಸಾಧ್ಯತೆಗಳಿಲ್ಲ ಎಂದು ಅವರು ಹೇಳಿದ್ದಾರೆ.
ನವದೆಹಲಿಯಲ್ಲಿ 25ನೇ ಏರ್ ಚೀಫ್ ಮಾರ್ಷಲ್ ಪಿಸಿ ಲಾಲ್ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಎಂ ಕೆ ನಾರಾಯಣನ್ ಅವರು ಮೇಲಿನಂತೆ ಭಾರತದಲ್ಲಿ ಆತಂಕವಾದದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಭಾರತದ ಮೇಲೆ ಬಾಂಬ್ ದಾಳಿ ಮತ್ತು ಇತರ ಹಿಂಸಾತ್ಮಕ ಕಾರ್ಯಗಳಿಗೆ ಬಾಂಗ್ಲಾದೇಶವನ್ನು ಪಾಕ್ ಮೂಲದ ಉಗ್ರರು ತಮ್ಮ ದಾಳಿಯ ಸಿದ್ದತೆಯ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ ಎಂದು ನಾರಾಯಣನ್ ಹೇಳಿದರು.
ಪಾಕಿಸ್ತಾನದ ಕೆಲವು ಪ್ರದೇಶಗಳಲ್ಲಿನ ನಾಗರಿಕರಲ್ಲಿ ಇಂದಿಗೂ ಭಾರತದ ವಿರುದ್ಧ ದ್ವೇಷದ ಭಾವನೆ ಇರುವುದನ್ನು ಯಾರೂ ನಿರಾಕರಿಸಲಾರರು. ಸ್ವಾತಂತ್ರ್ಯಾನಂತರ ಹುಟ್ಟಿಕೊಂಡ ಈ ಸಮಸ್ಯೆಯನ್ನು ಭಾರತ ಒಮ್ಮತದ ಮೂಲಕ ಪರಿಹರಿಸಬೇಕಾದ ಅನಿವಾರ್ಯತೆ ಇಂದು ಒದಗಿ ಬಂದಿದೆ ಎಂದು ರಾಷ್ಟ್ರೀಯ ಸುರಕ್ಷಾ ಸಲಹೆಗಾರರು ಉಪನ್ಯಾಸದಲ್ಲಿ ಹೇಳಿದರು.
ಪಾಕ್ ಮಿಲಿಟರಿ ಅಭಿವೃದ್ದಿ ಮತ್ತು ಶಸ್ತ್ರಾಸ್ತ್ರ ಸಂಗ್ರಹಣೆಯತ್ತ ನಾರಾಯಣನ್ ಉಪನ್ಯಾಸ ವಾಲಿತು. ಭಾರತ ಕೇಂದ್ರೀಕೃತವಾಗಿದ್ದು, ಭಾರತೀಯ ಸಶಸ್ತ್ರ ಸೇನಾಪಡೆಗಳಲ್ಲಿ ಇರುವ ಶಸ್ತ್ರಾಸ್ತ್ರ ಸಂಗ್ರಹಣೆಗೆ ಅನುಗುಣವಾಗಿ ಪಾಕ್ ಮಿಲಿಟರಿ ಪಡೆಗೆ ಅಲ್ಲಿನ ಸರಕಾರ ಶಸ್ತ್ರಾಸ್ತ್ರಗಳನ್ನು ನೀಡುವ ಯೋಜನೆ ರೂಪಿಸುತ್ತಿದೆ ಎಂದು ಅವರು ಹೇಳಿದರು.
|