ಇಂಧೋರ್‌ನಲ್ಲಿ ಸಿಮಿ ಮುಖಂಡ ಸಫ್ದಾರ್ ನಾಗೋರಿ ಸೇರಿದಂತೆ ಬಂಧಿಸಲ್ಪಟ್ಟ 13ಮಂದಿ ಉಗ್ರರು ಬೆಂಗಳೂರು, ಹೈದರಾಬಾದ್, ಮುಂಬೈ ಹಾಗೂ ಗೋವಾ ಸೇರಿದಂತೆ ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದರು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ ನಗರಿಯಲ್ಲಿ ಸ್ಫೋಟಕ ಕೃತ್ಯ ನಡೆಸುವುದು ಅವರ ಮೊದಲ ಗುರಿಯಾಗಿತ್ತು. ಪ್ರವಾಸಿಗರ ಆಕರ್ಷಣೆಗೆ ಒಳಗಾಗಿರುವ ಮೂರು ನಗರಗಳ ಮೇಲೂ ದಾಳಿ ನಡೆಸುವ ಯೋಜನೆಯನ್ನು ಅದು ಹೊಂದಿತ್ತು ಎಂದು ಕೇಂದ್ರ ಗೃಹ ಸಚಿವಾಲಯ ಮೂಲಗಳು ತಿಳಿಸಿವೆ.
ಸಿಮಿ ಸಂಘಟನೆಯ ವಾರ್ಷಿಕ ಸಭೆಯನ್ನು ಆಯೋಜಿಸುವ ಸಲುವಾಗಿ ಸಂಘಟನೆಯ ಮಾಜಿ ಮುಖ್ಯಸ್ಥ ಸಫ್ದಾರ್ ನಾಗೋರಿ ನೇತೃತ್ವದಲ್ಲಿ 13ಮಂದಿ ಸಿಮಿ ಕಾರ್ಯಕರ್ತರು ನಗರಕ್ಕೆ ಬಂದಿದ್ದರು. ಈ ಸಂದರ್ಭ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಬಗ್ಗೆ ತನ್ನ ಸದಸ್ಯರಿಗೆ ತರಬೇತಿ ನೀಡಲು ಅವರು ಉದ್ದೇಶಿಸಿದ್ದರು ಎಂಬುದಾಗಿ ಪ್ರಾಥಮಿಕ ತನಿಖೆ ವೇಳೆ ಬಹಿರಂಗಗೊಂಡಿದೆ ಎಂದು ಇಂಧೋರ್ ಐಜಿಪಿ ಅನಿಲ್ ಕುಮಾರ್ ಹೇಳಿದ್ದಾರೆ. ಈ ಭಯೋತ್ಪಾದಕರು ಕಳೆದ ಒಂದು ತಿಂಗಳಿನಿಂದ ನಗರದಲ್ಲಿ ಬೀಡು ಬಿಟ್ಟಿದ್ದರು. ಮಾತ್ರವಲ್ಲದೇ 2006ರ ಮುಂಬೈ ಸರಣಿ ಸ್ಫೋಟದಲ್ಲಿ ಬಂಧಿತರ ಕೈವಾಡವಿರುವ ಬಗ್ಗೆ ವಿಚಾರಣೆ ಬಾಯ್ಬಿಟ್ಟಿರುವುದಾಗಿ ಅವರು ತಿಳಿಸಿದ್ದಾರೆ.
ನಿಷೇಧಿತ ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ ಸಂಘಟನೆಯ ನಾಗೋರಿ ಹಾಗೂ 13ಮಂದಿ ಉಗ್ರರನ್ನು ಸ್ಥಳೀಯ ನ್ಯಾಯಾಲಯ ಏಪ್ರಿಲ್ 11ರ ತನಕ ಪೊಲೀಸ್ ವಶಕ್ಕೆ ಒಪ್ಪಿಸಿದೆ.
|