ದೇಶದ ಹಲವು ನ್ಯಾಯಾಲಯಗಳಲ್ಲಿ ಹಲವಾರು ಪ್ರಕರಣ ಎದುರಿಸುತ್ತಿರುವ ಬಹುಕೋಟಿ ಚಾಪಾ ಕಾಗದ ಹಗರಣದ ಖದೀಮ ಅಬ್ದುಲ್ ಕರೀಂ ಲಾಲಾ ತೆಲಗಿಯನ್ನು ನ್ಯಾಯಾಲಯವೊಂದು ಖುಲಾಸೆಗೊಳಿಸಿದೆ.
ಸಿಟಿ ಮಾರ್ಕೆಟ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಗಿ ಹಾಗೂ ಇತರ ನಾಲ್ವರನ್ನು ಇಲ್ಲಿನ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ. ತೆಲಗಿ ಎದುರಿಸುರಿಸುತ್ತಿರುವ ಪ್ರಕರಣಗಳಲ್ಲಿ ಆತ ದೋಷ ಮುಕ್ತನಾಗುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
1998ರಲ್ಲಿ ಸಿಟಿ ಮಾರ್ಕೆಟ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಪೊಲೀಸ್ ಇನ್ಸಪೆಕ್ಟರ್ ವಲಿ ಬಾಷಾ ಸಬ್ ಇನ್ಸ್ಪೆಕ್ಟರ್ ವಿ.ಎ. ಖಾನ್, ತೆಲಗಿ ಹಾಗೂ ಆತನ ಸಹಚರ ವಹೀದ್ ಖಾನ್ ಎಂಬುವವರನ್ನು ಸಾಕ್ಷಾಧಾರರ ಕೊರತೆಯಿಂದಾಗಿ ದೊಷಮುಕ್ತಗೊಳಿಸಿದೆ.
ಸುಪ್ರಿಂಕೋರ್ಟ್ ಆದೇಶದ ಮೇರೆಗೆ ಸಿಬಿಐ ಪೊಲೀಸರು ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ವಿಚಾರಣೆ ನಡೆಸಿದ ಇಲ್ಲಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಹುನಗುಂದ್ ಅವರು ಸೂಕ್ತ ಸಾಕ್ಷಾಧಾರಗಳಿಲ್ಲದಿದ್ದರಿಂದ ಆರೋಪ ಮುಕ್ತಗೊಳಿಸಿದ್ದಾರೆ.
ಈಗಾಗಲೇ 35 ಪ್ರಕರಣಗಳನ್ನು ಎದುರಿಸುತ್ತಿರುವ ತೆಲಗಿಗೆ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ. ರಾಜ್ಯ ಒಟ್ಟು 9 ಪ್ರಕರಣಗಳಲ್ಲಿ 7 ಪ್ರಕರಣಗಳು ಈಗಾಗಲೇ ವಿಚಾರಣೆ ನಡೆಸಿದ್ದು, ದೋಷಿ ಎಂದು ತೀರ್ಪು ನೀಡಿದೆ. ಅಲ್ಲದೆ, ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಛಾಪಾ ಕಾಗದ ಹಗರಣಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳು ಇನ್ನು ವಿಚಾರಣೆಗೆ ಒಳಪಡಬೇಕಿದೆ.
|