ಹತ್ಯೆಯಾದ ಬ್ರಿಟಿಷ್ ಯುವತಿ ಸ್ಕಾರ್ಲೇಟ್ ಕೀಲಿಂಗ್ ತಾಯಿ ಫಿಯೋನಾ ಮ್ಯಾಕವೊನ್ ಅವರು ಈಗ ಗೋವಾ ತೊರೆದಿದ್ದು ಮುಂಬೈ ಮೂಲಕ ಲಂಡನ್ ಸೋಮವಾರ ಪ್ರಯಾಣ ಬೆಳೆಸಲಿದ್ದಾರೆ.
ಮೂಲಗಳ ಪ್ರಕಾರ ಸ್ಕಾರ್ಲೇಟ್‌ಳ ಪಾರ್ಥೀವ ಶರಿರವು ಈಗಾಗಲೇ ಲಂಡನ್ ನಗರವನ್ನು ತಲುಪಿದ್ದು, ಲಂಡನ್‌ನಲ್ಲಿ ಇರುವ ವೈದ್ಯರಿಗೆ ಮೂರನೆ ಬಾರಿ ಶವಪರೀಕ್ಷೆ ನಡೆಸಬೇಕು ಎಂದು ಕೇಳಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಲಂಡನ್ ವೈದ್ಯರು ನೀಡುವ ಮರಣೋತ್ತರ ಪರೀಕ್ಷಾ ವರದಿಯನ್ನು ಭಾರತೀಯ ನ್ಯಾಯಾಲಯಗಳು ಕಾನೂನು ಬದ್ಧ ಸಾಕ್ಷಿ ಎಂದು ಪರಿಗಣಿಸುವುದಿಲ್ಲ.
ಸ್ಕಾರ್ಲೇಟ್ ಕೀಲಿಂಗ್‌ಳ ಅಸಹಜ ಸಾವಿನ ನಂತರ ನಡೆಸಿದ ಮೊದಲ ಮರಣೋತ್ತರ ಪರೀಕ್ಷಾ ವರದಿಯು ಸ್ಕಾರ್ಲೇಟ್ ಸಾವು ನೀರಿನಲ್ಲಿ ಕೊಚ್ಚಿಕೊಂಡು ಹೋದ ಕಾರಣ ಆಗಿದೆ ಎಂದು ಹೇಳಲಾಗಿತ್ತು.
ಫಿಯೋನಾ ಮ್ಯಾಕವೋನ್ ಎರಡನೆ ಮರಣೋತ್ತರ ಪರೀಕ್ಷೆಗೆ ಆಗ್ರಹಿಸಿದ ನಂತರ ಒತ್ತಡಕ್ಕೆ ಸಿಲುಕಿದ ಗೋವಾ ರಾಜ್ಯ ಆಡಳಿತವು ದ್ವಿತೀಯ ಶವ ಪರೀಕ್ಷೆ ನಡೆಸಿತು. ಎರಡನೆ ಶವ ಪರೀಕ್ಷೆಯಲ್ಲಿ ಮೃತ ಸ್ಕಾರ್ಲೇಟ್ ದೇಹದಲ್ಲಿ ಅಪಾರ ಪ್ರಮಾಣದ ಮಾದಕ ವಸ್ತು ಮತ್ತು ಅವಳ ಮೇಲೆ ಲೈಂಗಿಕ ಅತ್ಯಾಚಾರ ಎಸಗಲಾಗಿದೆ ಎನ್ನುವ ಮಾಹಿತಿಯನ್ನು ಹೊರಗೆಡಹಿತ್ತು. ಮಾದಕ ವಸ್ತು ಸೇವನೆ ಮತ್ತು ಲೈಂಗಿಕ ಅತ್ಯಾಚಾರದ ಕುರಿತು ಮೊದಲ ಶವ ಪರಿಕ್ಷಾ ವರದಿಯಲ್ಲಿ ಎಳ್ಳಷ್ಟೂ ಮಾಹಿತಿ ಇರಲಿಲ್ಲ.
ಫೆಬ್ರವರಿ 18ರಂದು ಅಂಜುನಾ ಬೀಚ್ ಬಳಿ ಸ್ಕಾರ್ಲೇಟ್ ಕೀಲಿಂಗ್‌ಳ ಮೃತ ದೇಹವು ಅರೆನಗ್ನಾವಸ್ಥೆಯಲ್ಲಿ ದೊರೆತಿತ್ತು. ಸ್ಕಾರ್ಲೇಟ್ ಮೇಲೆ ಮೊದಲು ಅತ್ಯಾಚಾರ ಎಸಗಿ ನಂತರ ಕೊಲೆ ಮಾಡಲಾಗಿದೆ ಎಂಬ ಸಂಶಯ ವ್ಯಕ್ತವಾಗಿದೆ.
|