ಹೊಗೇನಕಲ್ ನೀರಾವರಿ ಯೋಜನೆಗೆ ಕುರಿತು ಭಾನುವಾರದಂದು ನನ್ನ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಕರ್ನಾಟಕಕ್ಕೆ ಎಚ್ಚರಿ ಕೆ ನೀಡಿದ್ದ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯವರ ಹೇಳಿಕೆ ಇದೀಗ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.
ಯಾವುದೇ ಬೆಲೆ ತೆತ್ತಾದರೂ ನಾವು ಹೊಗೇನಕಲ್ ಯೋಜನೆಯನ್ನು ಪೂರ್ಣಗೊಳಿಸಿಯೇ ಸಿದ್ಧ ಎಂಬ ಕರುಣಾನಿಧಿಯವರ ಸವಾಲಿನ ಹೇಳಿಕೆಗೆ ಕನ್ನ ಡಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ನಿಲುವನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ರಾಜಕೀಯ ಪಕ್ಷಗಳು, ಸಂಘಸಂಸ್ಥೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಈ ನಿಟ್ಟಿನಲ್ಲಿ ತಮಿಳುನಾಡು ಹೊಗೇನಕಲ್‌ನಲ್ಲಿ ಆರಂಭಿಸಿರುವ ನೀರಾವರಿ ಯೋಜನೆಯನ್ನು ಕೂಡಲೇ ನಿಲ್ಲಿಸುವಂತೆ ಕೇಂದ್ರ ಸರಕಾರ ಸೂಚಿಸಬೇ ಕೆಂದು ಕರ್ನಾಟಕ ಕೇಂದ್ರಕ್ಕೆ ಆಗ್ರಹಿಸಿದೆ. ಈ ಬಗ್ಗೆ ಕೇಂದ್ರಕ್ಕೆ ಮತ್ತೊಮ್ಮೆ ಪತ್ರ ಬರೆಯುವುದಾಗಿ ರಾಜ್ಯದ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಸುಮಾರು 1334ಕೋಟಿ ರೂಪಾಯಿ ಹೊಗೇನಕಲ್ ನೀರಾವರಿ ಯೋಜನೆಯನ್ನು ಪ್ರಾಣ ತೆತ್ತಾದರೂ ಪೂರ್ಣಗೊಳಿಸುತ್ತೇವೆ. ಇದರಲ್ಲಿ ಕರ್ನಾಟಕ ಕೀಳುಮಟ್ಟದ ರಾಜಕೀಯ ಮಾಡುವುದು ಬೇಡ ಎಂಬುದಾಗಿ ಮುಖ್ಯಮಂತ್ರಿ ಕರುಣಾನಿಧಿ ಭಾನುವಾರದಂದು ಹೇಳಿಕೆ ನೀಡಿದ್ದರು.
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಮಿಳು ಚಿತ್ರ ಪ್ರದರ್ಶಿಸುತ್ತಿದ್ದ ನಗರದ ನಾಲ್ಕು ಚಿತ್ರ ಮಂದಿರಗಳ ಮೇಲೆ ದಾಳಿ ಮಾಡಿ, ಪೋಸ್ಟರ್, ಬ್ಯಾನರ್ ಹರಿದು ಹಾಕಿ ದಾಂಧಲೆ ನಡೆಸುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಶೇಷಾದ್ರಿಪುರಂನಲ್ಲಿರುವ ನಟರಾಜ, ಜೆ.ಸಿ.ರಸ್ತೆ ಸಮೀಪದ ಪೂರ್ಣಿಮಾ, ಮೈಸೂರು ರಸ್ತೆಯಲ್ಲಿರುವ ವಿನಾಯಕ, ಕೆ.ಆರ್.ಮಾರ್ಕೆಟ್‌ನಲ್ಲಿರುವ ಸೂಪರ್ ಚಿತ್ರಮಂದಿರಗಳು ಸೇರಿದಂತೆ ನಗರದ ವಿವಿಧೆಡೆ ಚಿತ್ರಮಂದಿರಗಳ ಮೇಲೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿದ್ದರು.
|