ಹೊಗೇನಕಲ್ ನೀರಾವರಿ ಯೋಜನೆಯ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ತಮಿಳ್ನಾಡು ನಡುವೆ ಭುಗಿಲೆದ್ದಿರುವ ಗಲಭೆಯ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿರುವ ತಮಿಳಿಗರಿಗೆ ಭದ್ರತೆ ಒದಗಿಸಬೇಕು ಎಂದು ಕೋರಿರುವ ತಮಿಳ್ನಾಡು, ಈ ಕುರಿತು ಕೇಂದ್ರ ಸರಕಾರ ಮಧ್ಯಪ್ರವೇಶಿಸುವಂತೆ ಕೋರಲು ನಿರ್ಣಯವನ್ನೂ ಪಾಸುಮಾಡಿದೆ.
ಕರ್ನಾಟಕದಲ್ಲಿ ತಮಿಳು ಸಿನಿಮಾ ಪ್ರದರ್ಶಿಸಿರುವ ಚಿತ್ರಮಂದಿರಗಳ ಹಾಗೂ ತಮಿಳು ಸಂಘಟನೆಯ ಕಚೇರಿಯೊಂದರ ಮೇಲೆ ನಡೆಸಲಾಗಿರುವ ದಾಳಿಯ ಕುರಿತಂತೆ ಕರ್ನಾಟಕ ಮುಖ್ಯಕಾರ್ಯದರ್ಶಿಯೊಂದಿಗೆ ಮಾತನಾಡಿರುವುದಾಗಿ ತಮಿಳ್ನಾಡು ಮುಖ್ಯ ಕಾರ್ಯದರ್ಶಿ ಎಲ್.ಕೆ.ತ್ರಿಪಾಠಿ ಹೇಳಿದ್ದಾರೆ.
ನಿರಂತರ ಸಂವಹನ ನಡೆಸುತ್ತಿದ್ದು ಕರ್ನಾಟಕವು ತಮಿಳರಿಗೆ ಸೂಕ್ತ ಭದ್ರತೆ ನೀಡಬಹುದೆಂಬ ವಿಶ್ವಾಸ ಹೊಂದಿರುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಭಾಷಾ ದುರಭಿಮಾನಿಗಳು ಎಬ್ಬಿಸಿರುವ ದಾಂಧಲೆ ಹಾಗೂ ದಾಳಿಗಳ ವಿರುದ್ಧ ಕೇಂದ್ರ ಸರಕಾರವು ಮಧ್ಯಪ್ರವೇಶಿಸಬೇಕು ಎಂಬ ನಿರ್ಣಯಕ್ಕೆ ಪಕ್ಷಭೇದವಿಲ್ಲದಂತೆ ಲಭಿಸಿರುವ ಅಪರೂಪದ ಬೆಂಬಲದಿಂದಾಗಿ ಅವಿರೋಧವಾಗಿ ಪಾಸುಮಾಡಲಾಗಿದೆ.
ತಮಿಳ್ನಾಡು ಯಾವಾಗಲೂ ತನ್ನ ನೆರೆರಾಜ್ಯಗಳೊಂದಿಗೆ ಸೌಹಾರ್ದ ಮತ್ತು ಭ್ರಾತ್ರತ್ವದ ಸಂಬಂಧ ಹೊಂದಿದೆ, ಆದರೆ ಈ ಅಂಧಾಭಿಮಾನಿಗಳು ತಮಿಳರ ಅಭ್ಯುದಯವನ್ನು ವಿರೋಧಿಸುತ್ತಿದ್ದಾರೆ. ಯೋಜನೆಯ ಕುರಿತ ವಿರೋಧ ಹಾಗೂ ಹಿಂಸಾಚಾರವು ರಾಷ್ಟ್ರದ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ವಿರೋಧವಾಗಿದೆ" ಎಂದು ತಮಿಳ್ನಾಡು ಮುಖ್ಯಮಂತ್ರಿ ಕರುಣಾನಿಧಿ ಹೇಳಿದ್ದಾರೆ.
"ಕರ್ನಾಟಕದ ಕೆಲವು ಭಾಷಾ ದುರಭಿಮಾನಿಗಳಿಗೆ ತಮಿಳರ ವಿರುದ್ಧ ಯಾವತ್ತೂ ಅಲರ್ಜಿ. ಇದನ್ನು ತೊಡೆದು ಹಾಕದಿದ್ದಲ್ಲಿ ಸಾರ್ವಭೌಮತ್ವ ಮತ್ತು ಸಮಗ್ರತೆ ಶಬ್ಧಗಳಾಗಿ ಮಾತ್ರ ಉಳಿಯುತ್ತದೆ" ಎಂದು ಅವರು ಅಭಿಪ್ರಾಯಿಸಿದ್ದಾರೆ.
ಕರುಣಾನಿಧಿ ವಂದನೆ ಕೇಂದ್ರದ ಹಸ್ತಕ್ಷೇಪ ಕೋರಿ ಪಾಸು ಮಾಡಲಾದ ನಿರ್ಣಯಕ್ಕೆ ಪಕ್ಷಬೇಧ ಮರೆತು ಬೆಂಬಲ ನೀಡಿದ ವಿರೋಧ ಪಕ್ಷಗಳಿಗೆ ಕರುಣಾನಿಧಿ ತಾನೇ ಸ್ವಯಂ ವಂದನೆಗಳನ್ನು ಸಲ್ಲಿಸಿದರು.
"ತಮಿಳರ ಕಾರಣಕ್ಕಾಗಿ ನಾವೆಲ್ಲರು ಒಂದಾಗುವಂತೆ ಮಾಡಿರುವ ಭಾಷಾ ದುರಭಿಮಾನಿ ಸಂಘಟನೆಗಳ ಕ್ರಮವನ್ನು ನಾವು ಸ್ವಾಗತಿಸಬೇಕು" ಎಂದು ಅವರು ಸದನ ವಂದನೆ ಸಲ್ಲಿಸುತ್ತಾ ನುಡಿದರು.
|