ವಿರೋಧ ಪಕ್ಷಗಳ ಮತ್ತು ಮಾಧ್ಯಮಗಳ ಒತ್ತಡಕ್ಕೆ ಮಣಿದಿರುವ ದಿಗಂಬರ್ ಕಾಮತ್ ನೇತೃತ್ವದ ಗೋವಾ ರಾಜ್ಯ ಸರಕಾರವು ಅಧಿಕೃತವಾಗಿ ಬ್ರಿಟಿಷ್ ಯುವತಿ ಸ್ಕಾರ್ಲೇಟ್ ಕೀಲಿಂಗ್ ಕೊಲೆ ಪ್ರಕರಣದ ತನಿಖೆಯನ್ನು ಕೇಂದ್ರೀಯ ಗುಪ್ತಚರ ಇಲಾಖೆ (ಸಿಬಿಐ)ಗೆ ಹಸ್ತಾಂತರಿಸಿದೆ.
ಕಳೆದ ಮಾರ್ಚ್ 25ರಂದು ಮುಖ್ಯಮಂತ್ರಿ ದಿಗಂಬರ್ ಕಾಮತ್ ಅವರು ಬ್ರಿಟಿಷ್ ಯುವತಿಯ ಕೊಲೆ ಪ್ರಕರವನ್ನು ಕೇಂದ್ರ ಸರಕಾರದ ತನಿಖಾ ಸಂಸ್ಥೆಗೆ ವಹಿಸಲು ಸಿದ್ದ ಎಂದು ಪ್ರಕಟಿಸಿದ ನಂತರ ಪ್ರಕರಣದ ತನಿಖೆ ಸಿಬಿಐ ವಶಕ್ಕೆ ಬಂದಂತಾಗಿದೆ.
ಗೋವಾ ಪೊಲೀಸರ ವಿರುದ್ಧ ಕಿಡಿ ಕಾಡಿ ಸರಕಾರ ಮತ್ತು ಜನರನ್ನು ಪೊಲೀಸರು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗವು ಕಿಡಿ ಕಾರಿತ್ತು.
ಈರ್ವರು ಸದಸ್ಯರನ್ನು ಒಳಗೊಂಡ ಮಹಿಳಾ ಆಯೋಗದ ಸತ್ಯ ಶೋಧನಾ ಸಮಿತಿಯು ಪೊಲೀಸರು ಕೊಲೆಗೆ ಸಂಬಂಧಿಸಿದ ಸಾಕ್ಷಿಗಳನ್ನು ನಾಶಪಡಿಸುವ ಪ್ರಯತ್ನದಲ್ಲಿದ್ದಾರೆ ಎಂದು ಹೇಳಿತ್ತು.
ಸ್ಕಾರ್ಲೇಟ್ ಕೀಲಿಂಗ್‍ಳ ಮೃತ ದೇಹ ಎನ್ನುವುದು ಅರಿವಿದ್ದರೂ ಅಪರಿಚಿತ ಶವ ಎಂದು ಪೊಲೀಸರು ಮೊದಲು ಹೇಳುವ ಪ್ರಯತ್ನ ಮಾಡಿದ್ದಾರೆ. ನಂತರ ಇತರ ಸಂಘಟನೆಗಳು ಸತ್ಯ ಶೋಧನೆಗೆ ಬರುವುದನ್ನು ಅರಿತು ಮಹತ್ವದ ಸಾಕ್ಷಿಗಳನ್ನು ಹಾಳು ಮಾಡುವ ಯತ್ನದಲ್ಲಿ ತೊಡಗಿದ್ದಾರೆ ಎಂದು ಮಹಿಳಾ ಆಯೋಗದ ಸದಸ್ಯೆ ನಿರ್ಮಲಾ ವೆಂಕಟೇಶ ಅವರು ಪತ್ರಿಕಾಗೋಷ್ಠಿಯಲ್ಲಿ ಆಪಾದಿಸಿದ್ದಾರೆ.
ರಾಜ್ಯ ವಿಧಾನ ಸಭೆಯ ಪ್ರಮುಖ ವಿರೋಧ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷವು ರಾಜ್ಯದ ಕರಾವಳಿ ತೀರದ ಉದ್ದಕ್ಕೂ ಹರಡುತ್ತಿರುವ ಮಾದಕ ವಸ್ತು ಪೂರೈಕೆ ಜಾಲವನ್ನು ಮಟ್ಟ ಹಾಕಬೇಕಾದರೆ ಸಿಬಿಐ ತನಿಖೆಯೊಂದೇ ಪರಿಹಾರ ಎಂದು ವಾದಿಸಿತ್ತು.
|