ಡಾ. ವೈ, ಎಸ್. ರಾಜಶೇಖರ್ ರೆಡ್ಡಿ ಸರಕಾರದ ವಿರುದ್ಧ ವಿರೋಧ ಪಕ್ಷ ತೆಲುಗು ದೇಶಂ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ನಿರ್ಣಯಕ್ಕೆ ಆಂಧ್ರಪ್ರದೇಶ ವಿಧಾನ ಸಭೆಯಲ್ಲಿ ಗುರುವಾರ ಸೋಲು ಉಂಟಾಗಿದೆ. ಮೂರು ದಿನಗಳ ಕಾಲ ನಡೆದ ಅವಿಶ್ವಾಸ ಗೊತ್ತುವಳಿ ನಿರ್ಣಯಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆಯ ನಂತರ ಧ್ವನಿ ಮತದ ಮೂಲಕ ನಿರ್ಣಯ ಸ್ವೀಕರಿಸಲಾಯಿತು.
ಸತತ ಮೂರು ದಿನಗಳ ಕಾಲ ನಡೆದ ವಿಶ್ವಾಸ ಮತಯಾಚನೆಯ ಚರ್ಚೆಯ ಸಂದರ್ಭದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದವು. ಅಂತಿಮವಾಗಿ ಧ್ವನಿ ಮತದ ಮೂಲಕ ವಿಶ್ವಾಸ ಮತಯಾಚನೆಗೆ ಅವಕಾಶ ನೀಡಿದ ನಂತರ ಗೊತ್ತುವಳಿ ಅವಶ್ಯಕ ಬಹುಮತವನ್ನು ಪಡೆಯಲು ವಿಫಲವಾಗಿದೆ ಎಂದು ಸ್ಪೀಕರ್ ಕೆ ಆರ್ ಸುರೇಶ ರೆಡ್ಡಿ ಪ್ರಕಟಿಸಿ ವಿಧಾನ ಸಭಾ ಅಧಿವೇಶನವನ್ನು ಅನಿರ್ದಿಷ್ಟ ಕಾಲಾವಧಿಯವರೆಗೆ ಮುಂದೂಡಿದರು.
294 ವಿಧಾನ ಸಭಾ ಸದಸ್ಯತ್ವದ ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ, ಆಡಳಿತ ಪಕ್ಷ ಕಾಂಗ್ರೆಸ್ 185 ಸದಸ್ಯರನ್ನು ಹೊಂದಿದೆ. ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿರುವ ತೆಲುಗು ದೇಶಂ ಕೇವಲ 45 ಸದಸ್ಯ ಬಲವನ್ನು ಹೊಂದಿದೆ.
ವಿಶ್ವಾಸ ಮತಯಾಚನೆಯ ಸಂದರ್ಭದಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡ ತೆಲುಗು ದೇಶಂ ಪಕ್ಷದ ಸದಸ್ಯರು ರಾಜಶೇಖರ ರೆಡ್ಡಿ ಸರಕಾರದ ವೈಫಲ್ಯಗಳನ್ನು ಎತ್ತಿ ತೋರಿಸಿದರು. ರಾಜಶೇಖರ ರೆಡ್ಡಿಯವರ ನಾಲ್ಕು ವರ್ಷದ ಆಡಳಿತಾವಧಿಯಲ್ಲಿ ಭೃಷ್ಟಾಚಾರ, ಪಕ್ಷಪಾತಿತನ, ನಿರಾವರಿ ಮತ್ತು ಗೃಹ ನಿರ್ಮಾಣ ಯೋಜನೆಗಳಲ್ಲಿ ಆಗಿರುವ ಆಕ್ರಮಗಳ ಕುರಿತು ಮಾತನಾಡಿದರು.
ವಿರೋಧ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರು ಮಾತನಾಡುತ್ತ ರಾಜ್ಯದಲ್ಲಿ ಭೃಷ್ಟಾಚಾರ ಮಿತಿ ಮೀರಿದೆ, ಭೃಷ್ಟಾಚಾರದಲ್ಲಿ ತೊಡಗಿರುವ ಸರಕಾರ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಅಧಿಕಾರ ಹೊಂದಿಲ್ಲ ಎಂದು ಆಪಾದಿಸಿದರು.
ವಿರೋಧ ಪಕ್ಷದ ಟೀಕೆಗಳಿಗೆ ಉತ್ತರಿಸಿದ ಮುಖ್ಯಮಂತ್ರಿ ವೈ. ಎಸ್ ರಾಜಶೇಖರ ರೆಡ್ಡಿ ಅವರು ಚುನಾವಣೆಗೆ ಮುನ್ನ ರಾಜ್ಯ ಸಮಗ್ರ ಅಭಿವೃದ್ದಿಗೆ ಶ್ರಮಿಸುವುದಾಗಿ ಭರವಸೆ ನೀಡಲಾಗಿತ್ತು ಅದರ ಪ್ರಕಾರ ಸರಕಾರವು ಎಲ್ಲ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ ಎಂದು ಹೇಳಿದರು.
|