ಹೊಗೇನಕಲ್‌ನಲ್ಲಿ ಕರುಣಾನಿಧಿ ಹಾಕಿದ ದ್ವೇಷದ ಹೊಗೆಯ ಪ್ರಭಾವ ಹೆಚ್ಚಾಗುತ್ತಿದ್ದು, ತಮಿಳುನಾಡಿನಲ್ಲಿ ಗುರುವಾರ ಕನ್ನಡದ ಹಿರಿಯ ನಟ ವಿಷ್ಣುವರ್ಧನ್ ಮನೆಯಲ್ಲಿ ದಾಂಧಲೆ ನಡೆದಿದ್ದರೆ, ಎರಡು ಹೋಟೆಲ್‌ಗಳಿಗೆ ಹಾಗೂ ಚೆನ್ನೈನ ಕರ್ನಾಟಕ ಸಂಘಕ್ಕೆ ಹಾನಿ ಮಾಡಲಾಗಿದೆ.
ಪೆರಿಯಾರ್ ದ್ರಾವಿಡ ಕಳಗಂ (ಪಿಡಿಕೆ) ಕಾರ್ಯಕರ್ತರು ಗುರುವಾರ ಸಂಜೆ ನುಂಗಂಬಾಕ್ಕಂನಲ್ಲಿರುವ ಹೋಟೆಲ್ ಒಂದರ ಗಾಡು ಪುಡಿ ಮಾಡಿ, ಶೋಕೇಸ್‌ಗಳನ್ನು ಧ್ವಂಸ ಮಾಡಿದ್ದಾರೆ. ಹೋಟೆಲ್ ಮಾಲೀಕರು ನೀಡಿದ ದೂರಿನನ್ವಯ 7 ಪಿಡಿಕೆ ಕಾರ್ಯಕರ್ತರನ್ನು ಬಂಧಿಸಲಾಗಿದೆ.
ವಿದುತಲೈ ಚಿರುತೈಗಳ್ ಕಚ್ಚಿ (ವಿಸಿಕೆ) ಕಾರ್ಯಕರ್ತರು ಕೂಡ ಇನ್ನೊಂದೆ ರೆಸ್ಟಾರೆಂಟ್ ಮೇಲೆ ದಾಳಿ ನಡೆಸಿ, ಚೆನ್ನೈನ ಕರ್ನಾಟಕ ಸಂಘವನ್ನೂ ಗುರಿಯಾಗಿಸಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ತಮಿಳು ಸಂಘದ ಕಚೇರಿ ಮೇಲೆ ನಡೆದ ದಾಳಿಗೆ ಪ್ರತಿಯಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ.
ಕನ್ನಡ ಸಂಘದ ಕಚೇರಿಯಲ್ಲಿರುವ ಬೋರ್ಡ್‌ನಲ್ಲಿ ಕನ್ನಡ ಬರವಣಿಗೆ ಮೇಲೆ ಕಪ್ಪು ಮಸಿ ಬಳಿದಿರುವ ಅವರು, ಪ್ರತಿಭಟನಾ ಪ್ರದರ್ಶನ ನಡೆಸಲು ಯತ್ನಿಸಿದರಾದರೂ, ಪೊಲೀಸರ ಪ್ರವೇಶದಿಂದ ಆ ಯತ್ನವನ್ನು ತಡೆಯಲಾಯಿತು. ಬುಧವಾರವೂ ಎರಡು ಹೋಟೆಲ್‌ಗಳು ತಮಿಳರ ದಾಳಿಗೆ ತುತ್ತಾಗಿದ್ದವು.
ಈ ಬಗ್ಗೆ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಪಿ.ಆಚಾರ್ ಅವರು ವೆಬ್‌ದುನಿಯಾಕ್ಕೆ ಪ್ರತಿಕ್ರಿಯಿಸಿ, ಹೆಚ್ಚಿನ ಹಾನಿಯೇನೂ ಸಂಭವಿಸಿಲ್ಲ, ಪೊಲೀಸರು ಸೂಕ್ತ ಸಮಯದಲ್ಲಿ ಬಂದು ಸೂಕ್ತ ರಕ್ಷಣೆ ನೀಡಿದ್ದಾರೆ ಎಂದಿದ್ದಾರೆ.
ವಿಷ್ಣು ವರ್ಧನ್ ಮನೆಗೆ ದಾಳಿ: ಥೇಣಿ ಎಂಬಲ್ಲಿ ವಿಷ್ಣುವರ್ಧನ್ ಅವರಿಗೆ ಸೇರಿದ ಫಾರ್ಮ್ ಹೌಸ್‌ಗೆ ಡಿಎಂಕೆ ಮತ್ತು ಎಐಎಡಿಎಂಕೆ ಯುವ ಘಟಕಗಳ ಕಾರ್ಯಕರ್ತರು ಸ್ಥಳೀಯ ಭಾಷಾ ಸಂಘಟನೆಯ ಸಹಕಾರದೊಂದಿಗೆ ಸೇರಿಕೊಂಡು ದಾಳಿ ಮಾಡಿದ್ದಾರೆ.
ತಮಿಳು ಇಲಕಿಯ ಪೆರವೈ ಎಂಬ ಭಾಷಾ ಸಂಘಟನೆ ಜತೆ ಆಡಳಿತ ಪಕ್ಷ ಡಿಎಂಕೆ ಹಾಗೂ ಪ್ರತಿಪಕ್ಷ ಎಐಎಡಿಎಂಕೆ ಕಾರ್ಯಕರ್ತರು ಸೇರಿಕೊಂಡು ದಾಳಿ ಮಾಡಿದ್ದು. ಕೆಲವು ವಾಹನಗಳಿಗೆ ಹಾನಿ ಮಾಡಿದ್ದಲ್ಲದೆ ಕೆಲವು ಉಪಕರಣಗಳನ್ನು ಪುಡಿಗೈದಿದ್ದಾರೆ. ಆದರೆ ಅಲ್ಲಿದ್ದ ನೌಕರರಿಗೆ ಏನನ್ನೂ ಮಾಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಪ್ರತಿಭಟನೆ, ದಾಳಿಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಕರ್ನಾಟಕ ಮೂಲದ ಉದ್ಯಮ ಕೇಂದ್ರಗಳಿಗೆ, ಹಾಗೂ ಮೂಲತಃ ಕನ್ನಡಿಗರಾದ ನಟರಾದ ರಜನೀಕಾಂತ್ ಹಾಗೂ ಅರ್ಜುನ್ ಅವರ ನಿವಾಸಗಳಿಗೆ ಭದ್ರತೆ ನೀಡಿದ್ದಾರೆ.
|