ಹೊಗೇನಕಲ್ ನೀರಿನ ವಿವಾದಕ್ಕೆ ಸಂಬಂಧಿಸಿ ಕರ್ನಾಟಕದಲ್ಲಿ ತಮಿಳು ಜನರ ಮೇಲಿನ ದಾಳಿ ಹಾಗೂ ತಮಿಳು ಚಿತ್ರಗಳ ನಿಷೇಧ ವಿರೋಧಿಸಿ ತಮಿಳು ಚಿತ್ರ ನಿರ್ಮಾಪಕರ ಸಂಘವು ಚೆನ್ನೈಯಲ್ಲಿ ಶುಕ್ರವಾರ ಪ್ರತಿಭಟನಾ ಸಭೆ ನಡೆಸುತ್ತಿದ್ದು, ರಜನೀಕಾಂತ್ ಸಹಿತ ಕನ್ನಡ ಮೂಲದ ಚಿತ್ರ ನಟರು ಕೂಡ ಭಾಗವಹಿಸುತ್ತಿದ್ದಾರೆ.
ಈ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವಂತೆ ತಮಿಳು ಚಿತ್ರ ನಿರ್ಮಾಪಕರ ಸಂಘವು ನಟ ರಜನೀಕಾಂತ್ ಅವರಿಗೆ ಎಚ್ಚರಿಕೆ ಸಹಿತದ ಸಂದೇಶವೊಂದನ್ನು ನೀಡಿತ್ತು. 2002ರ ಕಾವೇರಿ ಜಲ ವಿವಾದದ ಸಂದರ್ಭದಲ್ಲಿ ನಡೆದಿದ್ದ ತಮಿಳು ಚಿತ್ರರಂಗದ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸದಿದ್ದ ರಜನೀಕಾಂತ್, ತಮಿಳು ಚಿತ್ರೋದ್ಯಮದ ಟೀಕೆಗೆ ಗುರಿಯಾಗಿದ್ದರು. ನಡಿಗರ್ ಸಂಘಂ (ಚಿತ್ರ ಕಲಾವಿದರ ಒಕ್ಕೂಟ) ಅಧ್ಯಕ್ಷ ಶರತ್ ಕುಮಾರ್ ಅವರು, ಈ ಉಪವಾಸ ಸತ್ಯಾಗ್ರಹದಲ್ಲಿ ತಮಿಳು ಚಿತ್ರೋದ್ಯಮದ ಎಲ್ಲಾ ನಟರು, ತಂತ್ರಜ್ಞರು, ಇತರ ಕಲಾವಿದರು ಭಾಗವಹಿಸುವಂತೆ ಕರೆ ನೀಡಿದ್ದರು.
'ಹುಟ್ಟಿನಿಂದ ಅಥವಾ ಮಾತೃಭಾಷೆಯಿಂದ ಕರ್ನಾಟಕದವರಾಗಿರುವ ಕಲಾವಿದರು, ನಿರ್ಮಾಪಕರು, ನಿರ್ದೇಶಕರು ಕೂಡ ಈ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಬೇಕು' 'ಫರ್ಮಾನು' ಹೊರಡಿಸಿದ್ದ ಶರತ್ ಕುಮಾರ್, ಭಾಗವಹಿಸಲು ವಿಫಲರಾದವರು ತಮಿಳು ಚಿತ್ರೋದ್ಯಮದಿಂದ 'ಅಸಹಕಾರ' ಎದುರಿಸಬೇಕಾದೀತು ಎಂಬ ಎಚ್ಚರಿಕೆಯನ್ನೂ ಜೊತೆಗೇ ಸೇರಿಸಿದ್ದರು.
ಚೆನ್ನೈಯಲ್ಲಿ ನಡೆಯುತ್ತಿರುವ ತಮಿಳು ಚಿತ್ರರಂಗದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಚಿತ್ರೋದ್ಯಮದ ಮಂದಿಯಲ್ಲಿ ಕೆಲವರು ಮೈಕಿನ ಮುಂದೆ ಬಂದು, ಹೊಗೇನಕಲ್ ನಮಗೆ ಸೇರಿದ್ದು, ಬೆಂಗಳೂರು ನಮಗೆ ನೀರು ಕೊಡುತ್ತಿಲ್ಲ ಎಂಬುದೇ ಮುಂತಾಗಿ, ಪ್ರತಿಭಟನೆಯ ಮೂಲ ಉದ್ದೇಶವನ್ನು ಮರೆತು ಅಲವತ್ತುಕೊಳ್ಳುತ್ತಿದ್ದುದು ಕಂಡು ಬಂತು.
ಇನ್ನು ಕೆಲವರು ಮಾತ್ರ, ಬೆಂಗಳೂರಿನಲ್ಲಿ ತಮಿಳು ಚಿತ್ರಗಳನ್ನು ತಡೆಯೊಡ್ಡಿದ, ಪ್ರದರ್ಶನಕ್ಕೆ ತಡೆಯೊಡ್ಡಿ ದಾಂಧಲೆ ನಡೆಸಿದ ಪ್ರಕರಣದ ವಿರುದ್ಧ ಧ್ವನಿಯೆತ್ತಿದರು.
|