ಪಶ್ಚಿಮ ದೆಹಲಿಯ ತಿಲಕ್‌ನಗರದ ಖಾಯಾಲಾ ಪ್ರದೇಶದಲ್ಲಿ ಮೂವರು ಯುವಕರು 12ವರ್ಷದ ಬಾಲೆಯ ಮೇಲೆ ಅತ್ಯಾಚಾರವೆಸಗಿದ ದಾರುಣ ಘಟನೆ ವರದಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೆಲ ಸ್ಥಳಗಳನ್ನು ತೋರಿಸುವುದಾಗಿ ನಂಬಿಸಿ ನೆರೆಹೊರೆಯಲ್ಲಿದ್ದ ಪರಿಚಿತ ಮೂವರು ಯುವಕರು ಬಾಲೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಮುಖ ಆರೋಪಿ ರಾಜೀವ್ ಪೋರ್ವಾಲ್ (23) ಮತ್ತು ಆತನ ಸಹಚರರಾದ ಮನಮೋಹನ್ ಅಲಿಯಾಸ್ ಮನು(20) ರಾಕೇಶ್ ಅಲಿಯಾಸ್ ರಾಜ್ (21) ಅವರುಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲೆಯ ಮನೆಯ ಹತ್ತಿರದಲ್ಲಿ ರಾಜೀವ್ ಪೋರ್ವಾಲ್ ಕಿರಾಣಿ ಅಂಗಡಿಯ ವ್ಯಾಪಾರವನ್ನು ಮಾಡುತ್ತಿದ್ದು, ಕಾರಿನಲ್ಲಿ ಪ್ರೇಕ್ಷಣಿಯ ಸ್ಥಳಗಳನ್ನು ತೋರಿಸುವುದಾಗಿ ನಂಬಿಸಿ ತನ್ನ ಸಹಚರರಾದ ಮನಮೋಹನ್ ಮತ್ತು ರಾಕೇಶ್ ಅವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದನು ಎನ್ನಲಾಗಿದೆ.
ಸಾಯಂಕಾಲವಾದ ನಂತರ ಮನೆಗೆ ಮರಳಿದ ಬಾಲೆ ತನ್ನ ಮೇಲೆ ಮೂವರು ಯುವಕರು ಅತ್ಯಾಚಾರವೆಸಗಿದ್ದಾರೆ ಎಂದು ಹಿರಿಯ ಸಹೋದರಿಗೆ ತಿಳಿಸಿದ ನಂತರ ಸಹೋದರಿ ತಾಯಿಗೆ ಮಾಹಿತಿ ನೀಡಿದ್ದಾಳೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಅತ್ಯಾಚಾರಕ್ಕೆ ಬಲಿಯಾದ ಬಾಲೆಯನ್ನು ದೀನ ದಯಾಳ ಉಪಾಧ್ಯಾಯ ಆಸ್ಪತ್ರೆಗೆ ಪರೀಕ್ಷೆಗಾಗಿ ದಾಖಲಿಸಲಾಗಿದ್ದು ವೈದ್ಯರು ಬಾಲೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ವರದಿಯನ್ನು ಸಲ್ಲಿಸಿದ್ದಾರೆ ,ಅತ್ಯಾಚಾರವೆಸಗಿದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರಾದ ಅಗರವಾಲ್ ತಿಳಿಸಿದ್ದಾರೆ.
ತಿಲಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅತ್ಯಾಚಾರಕ್ಕೀಡಾದ ಬಾಲೆಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
|