ವಿವಾದಾಸ್ಪದ ಹೊಗೇನಕಲ್ ಕುಡಿಯುವ ನಿರಾವರಿ ಯೋಜನೆಯನ್ನು, ಕರ್ನಾಟಕದಲ್ಲಿ ಚುನಾವಣೆ ನಡೆಯುವ ತನಕ ತಡೆಹಿಡಿಯಲು ತಮಿಳ್ನಾಡು ಮುಖ್ಯಮಂತ್ರಿ ಕರುಣಾನಿಧಿ ನಿರ್ಧಿರಿಸಿದ್ದಾರೆ.
ಹೊಗೇನಕಲ್ ಯೋಜನೆಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಯಾವುದೇ ಹಿಂಸಾಚಾರವನ್ನು ಬಯಸದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಕರುಣಾನಿಧಿ ಹೇಳಿದ್ದಾರೆ.
ಈ ವಿಚಾರದಲ್ಲಿ ಅವಶ್ಯಕತೆಯುಂಟಾದಲ್ಲಿ ಸುಪ್ರೀಂಕೋರ್ಟಿಗೆ ತೆರಳುವುದಾಗಿ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ನ ಹಿರಿಯ ನಾಯಕ ಎಸ್ಸೆಂ ಕೃಷ್ಣ ಹೇಳಿಕೆ ನೀಡಿರುವ ಬೆನ್ನಿಗೆ ಕರುಣಾನಿಧಿಯವರ ಈ ಹೇಳಿಕೆ ಹೊರಬಿದ್ದಿದೆ.
ಸುಪ್ರೀಂ ಕೋರ್ಟಿಗೆ ತೆರಳಿದಲ್ಲಿ, ಯುಪಿಎಯ ಪ್ರಮುಖ ಅಂಗ ಪಕ್ಷವಾಗಿರುವ ಡಿಎಂಕೆಗೆ ಅಸಮಾಧಾನವಾದರೂ ಈ ಕುರಿತು ಚಿಂತಿಸುವುದಿಲ್ಲ ಎಂದು ಕೃಷ್ಣ ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದರು.
ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಬುಧವಾರ ಭೇಟಿಮಾಡಿದ ಎಸ್ಸೆಂ ಕೃಷ್ಣ, ಹೊಗೇನಕಲ್ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಕೇಂದ್ರ ಸರಕಾರವನ್ನು ವಿನಂತಿಸಿದ್ದರು. ಕರ್ನಾಟಕದಲ್ಲಿ ನೂತನ ಸರಕಾರ ಅಸ್ತಿತ್ವಕ್ಕೆ ಬರುವ ತನಕ ಯೋಜನೆಯ ಕಾರ್ಯಾಚರಣೆಯನ್ನು ತಡೆಹಿಡಿಯುವಂತೆ ತಮಿಳ್ನಾಡು ಸರಕಾರಕ್ಕೆ ಮನವರಿಕೆ ಮಾಡುವಂತೆ ಅವರು ಈ ವೇಳೆ ಒತ್ತಾಯಿಸಿದ್ದರು.
|