ಹೊಗೇನಕಲ್ ವಿವಾದಕ್ಕೆ ಸಂಬಂಧಿಸಿದಂತೆ, ಸೂಪರ್ ಸ್ಟಾರ್ ರಜನಿಕಾಂತ್ ತಮಿಳ್ನಾಡನ್ನು ಸಮರ್ಥಿಸಿಕೊಂಡಿರುವ ಹಿನ್ನೆಲೆಯಲ್ಲಿ, ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ವಿರುದ್ಧ ಮತ್ತೆ ಹರಿಹಾಯ್ದಿರುವ ಶಿವಸೇನೆಯು, ಬಿಗ್ ಬಿ ಮತ್ತು ಇತರ ಬಾಲಿವುಡ್ ತಾರೆಯರು ಮರಾಠಿಗರ ಧ್ಯೇಯೋದ್ದೇಶಗಳನ್ನು ಬೆಂಬಲಿಸುವುದಿಲ್ಲ ಎಂದು ದೂರಿದೆ.
ಶಿವಸೇನಾದ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ "ಮುಂಬೈ ಮತ್ತು ಮಹಾರಾಷ್ಟ್ರದಿಂದ ಅನುಕೂಲ ಪಡೆದವರು ಮರಾಠಿಗರ ಧ್ಯೇಯೋದ್ದೇಶಗಳಿಗೆ ಸಂಬಂಧ ಪಟ್ಟ ವಿಚಾರಗಳಿಂದ ದೂರ ಸರಿಯುತ್ತಾರೆ. ಇದರಲ್ಲಿ ಅಮಿತಾಬ್ ಬಚ್ಚನ್‌ನಂತಹವರು ಸೇರಿದ್ದಾರೆ" ಎಂದು ಹೇಳಿದೆ.
ಅಮಿತಾಬ್ ಬಚ್ಚನ್ ಮುಂಬೈ ನಗರದಲ್ಲಿ ಕರ್ಕಶ ಹಾರ್ನ್ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಸಂದರ್ಭದಲ್ಲೇ ಈ ಲೇಖನ ಹೊರಬಿದ್ದಿದೆ.
ಸಾಮ್ನಾ ಸಂಪಾದಕೀಯದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಬಚ್ಚನ್ "ನಾನು ಮಹಾರಾಷ್ಟ್ರಕ್ಕಾಗಿ ಸಾಕಷ್ಟು ಮಾಡಿದ್ದೇನೆ ಎಂದು ನಿಮಗನಿಸುವುದಿಲ್ಲವೇ? ನನ್ನ ಕೊಡುಗೆಗಳ ಕುರಿತು ನಿಮಗೆ ತಿಳಿಯದಿದ್ದಲ್ಲಿ ಅದು ನಾಚಿಕೆಗೇಡು" ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಎರಡು ತಿಂಗಳ ಹಿಂದೆ ಎಂಎನ್ಎಸ್‌ನ ರಾಜ್ ಠಾಕ್ರೆ ಅಮಿತಾಬ್ ವಿರುದ್ಧ ವಾಗ್ಧಾಳಿ ನಡೆಸಿದ್ದ ವೇಳೆ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆ ನೀಡಿದ್ದ ಹೇಳಿಕೆಗೆ ಇದು ಸಂಪೂರ್ಣ ವ್ಯತಿರಿಕ್ತವಾಗಿದೆ.
|