ಹೊಗೇನಕಲ್ ವಿಚಾರವಾಗಿ ತನ್ನನ್ನು ತಮಿಳಿನ ಸೂಪರ್‌ಸ್ಟಾರ್ ಜತೆಗೆ ಹೋಲಿಸಿರುವುದಕ್ಕೆ ಕಿಡಿಕಿಡಿಯಾಗಿರುವ ಬಿಗ್ ಬಿ ಅಮಿತಾಬ್ ಅವರು, ಮುಂಬೈಗೆ ನಾನೇನು ಮಾಡಿದ್ದೇನೆಂದು ಕೇಳುವ ಹಕ್ಕು ಯಾರಿಗೂ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಮುಂಬೈಗಾಗಿ ನಾನು ಏನು ಮಾಡಿದ್ದೇನೆಂದು ಯಾರೂ ಪ್ರಶ್ನಿಸುವ ಅಗತ್ಯವಿಲ್ಲ, ಏನು ಮಾಡಿದ್ದೇನೆಂದು ನನಗೆ ಗೊತ್ತಿದೆ ಎಂದು ಅಮಿತಾಬ್ ಶಿವಸೇನೆಯ ಮುಖವಾಣಿ ಪತ್ರಿಕೆ ಸಾಮ್ನಾದಲ್ಲಿ ಪ್ರಕಟವಾಗಿರುವ ಸಂಪಾದಕೀಯಕ್ಕೆ ಪ್ರತಿಕ್ರಿಯೆ ನೀಡುತ್ತಾ ಹೇಳಿದ್ದಾರೆ.
ನೋ ಹಾಂಕ್ ಡೇ(ಹಾರ್ನ್ ರಹಿತ ದಿನ)ದ ಅಂಗವಾಗಿ ಉಪನಗರ ಬಾಂದ್ರಾದ ಮೆಹಬೂಬ್ ಸ್ಟುಡಿಯೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಮಹಾರಾಷ್ಟ್ರಕ್ಕೆ ಏನೂ ಮಾಡಿಲ್ಲ ಎಂದು ನಿಮಗನ್ನಿಸುತ್ತಿದೆಯೇ, ಹಾಗೇನಾದರೂ ನೀವು ಭಾವಿಸುತ್ತಿದ್ದರೆ ಅದು ದುರದೃಷ್ಟಕರ ಎಂದು ಅಮಿತಾಬ್ ಹೇಳಿದರು.
ಇತ್ತೀಚೆಗೆ ಕರ್ನಾಟಕ-ತಮಿಳುನಾಡು ಗಡಿಭಾಗದ ಹೊಗೇನಕಲ್ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಎದ್ದ ವಿವಾದ ಹಾಗೂ ತಮಿಳುನಾಡಿನಲ್ಲಿ ತಮಿಳು ಚಿತ್ರೋದ್ಯಮ ಕರೆ ನೀಡಿದ್ದ ಉಪವಾಸ ಸತ್ಯಾಗ್ರಹದಲ್ಲಿ ತಮಿಳುನಟ ಕನ್ನಡ ಮೂಲದ ರಜನಿಕಾಂತ್ ಭಾಗವಹಿಸಿ, ಕರ್ನಾಟಕವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇದನ್ನೇ ಹೋಲಿಕೆ ಮಾಡಿದ ಶಿವಸೇನಾ ವರಿಷ್ಠ ಬಾಳ್ ಠಾಕ್ರೆ ಸಾಮ್ನಾ ಸಂಪಾದಕೀಯದಲ್ಲಿ ಮತ್ತೆ ಬಿಗ್ ಬಿ ವಿರುದ್ದ ಟೀಕಾ ಪ್ರಹಾರ ಹರಿಸಿದ್ದರು.
|