ಕರ್ನಾಟಕದಲ್ಲಿ ನೂತನ ಸರಕಾರ ಅಸ್ತಿತ್ವಕ್ಕೆ ಬರುವವರೆಗೆ ಹೊಗೇನಕಲ್ ಜಲ ಯೋಜನೆಯನ್ನು ತಡೆಹಿಡಿಯುವ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ನಿರ್ಧಾರವನ್ನು ಎಐಎಡಿಎಂಕೆ ವರಿಷ್ಠೆ ಜಯಲಲಿತಾ ಕಟುವಾಗಿ ಟೀಕಿಸಿ, ಯೋಜನೆಯನ್ನು ಕರ್ನಾಟಕ ಚುನಾವಣೆಯೊಂದಿಗೆ ತಳುಕು ಹಾಕುವ ಮೂಲಕ ಅವರು ರಾಜ್ಯದ ಜನತೆಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಆಪಾದಿಸಿದರು.
ಈ ನಿರ್ಧಾರ ತಮಿಳುನಾಡು ಜನತೆಗೆ ಎಸಗಿದ ದೊಡ್ಡ ಪ್ರಮಾದ ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.ಕರುಣಾನಿಧಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯುವುದಕ್ಕೆ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ. ರಾಜ್ಯ ತನ್ನ ಹಕ್ಕುಗಳಿಗಾಗಿ ಹೋರಾಡಲು ಸಿದ್ಧವಿರುವ ಸರಕಾರವೊಂದುನ್ನು ಹೊಂದಬೇಕಾಗಿತ್ತು ಎಂದು ಜಯಲಲಿತಾ ನುಡಿದರು.
ಹೊಗೇನಕಲ್ ತಮಿಳುನಾಡಿನ ಅವಿಭಾಜ್ಯ ಅಂಗವಾಗಿದೆ, ಹಾಗಿರುವಾಗ ಅವರು ಜಲ ಯೋಜನೆಯನ್ನು ಯಾಕೆ ಕರ್ನಾಟಕ ಚುನಾವಣೆಯೊಂದಿಗೆ ತಳುಕು ಹಾಕಬೇಕಿತ್ತು ಎಂದು ಪ್ರಶ್ನಿಸಿದ ಅವರು, ಕರ್ನಾಟಕಕ್ಕೆ ಯೋಜನೆ ಕುರಿತು ನಿರ್ಧರಿಸುವ ಹಕ್ಕಿದೆ ಎಂದು ಅವರು ಒಪ್ಪಿಕೊಳ್ಳುವರೇ, ಕರ್ನಾಟಕಕ್ಕೆ ಇಲ್ಲದ ಹಕ್ಕನ್ನು ಅವರು ನೀಡುತ್ತಿದ್ದಾರೆಯೇ, ನಮಗೆ ಇಂಥ ಮುಖ್ಯಮಂತ್ರಿ ಅಗತ್ಯವಿದೆಯೇ ಎಂದು ಹರಿಹಾಯ್ದಿದ್ದಾರೆ.
|