ಕೇಂದ್ರ ಸಚಿವ ಸಂಪುಟದ ಪುನಾರಚನೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಬಯಸಿದ್ದೆ ಆದರೆ ರಾಹುಲ್ ಗಾಂಧಿ ಸ್ವತಃ ಸಚಿವ ಸ್ಥಾನ ನಿರಾಕರಿಸಿ ಪಕ್ಷದ ಚಟುವಟಿಕೆಗಳಲ್ಲಿ ತೋಡಗಿಸಿಕೊಳ್ಳುವ ಇಚ್ಚೆ ವ್ಯಕ್ತಪಡಿಸಿದರು ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಸಂಪುಟ ಪುನಾರಚನೆಯ ನಂತರ ರಾಷ್ಟ್ರಪತಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸೋನಿಯಾ ಗಾಂಧಿ ಅವರು ಕೇಂದ್ರ ಸಚಿವ ಸಂಪುಟದಲ್ಲಿ ಯುವಕರಿಗೆ ಆದ್ಯತೆ ನೀಡುವುದು ನನ್ನ ಆದ್ಯತೆಯಾಗಿತ್ತು. ಸಮ್ಮಿಶ್ರ ಸರಕಾರ ಇರುವ ಕಾರಣ ಪೂರ್ಣ ಪ್ರಮಾಣದ ಯುವ ಸಚಿವ ಸಂಪುಟದ ರಚನೆ ಸಾಧ್ಯವಿಲ್ಲ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷನಾಗಿರುವ ಕಾರಣ ಸಚಿವ ಸ್ಥಾನದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಿಕ್ಕೆ ಆಗುವುದಿಲ್ಲ ಕಾರಣ ಸಚಿವ ಸ್ಥಾನ ನನಗೆ ಬೇಡ ಎಂದು ರಾಹುಲ್ ಗಾಂಧಿ ಸ್ಪಷ್ಟ ಪಡಿಸಿದ್ದರು.
ಕೇವಲ ಜ್ಯೋತಿರಾದಿತ್ಯ ಮತ್ತು ಜಿತೀನ್ ಪ್ರಸಾದ್ ಅವರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೋನಿಯಾ ಗಾಂಧಿ ಅವರು, ಸರಕಾರದಲ್ಲಿ ಭಾಗಿಯಾಗಿರುವ ಇತರ ಮಿತ್ರ ಪಕ್ಷಗಳ ಭಾವನೆಯನ್ನು ನೇತೃತ್ವ ವಹಿಸಿಕೊಂಡಿರುವ ಪಕ್ಷ ಗೌರವಿಸಬೇಕಾಗುತ್ತದೆ ಎಂದು ಹೇಳಿದರು.
|