ಹೊಗೇನಕಲ್‌ನ ಹೊಗೆ ಸದ್ಯಕ್ಕೆ ಶಮನವಾಗಿರಬಹುದು, ಆದರೆ ಕರ್ನಾಟಕ ಚುನಾವಣೆಗಳು ಪೂರ್ಣಗೊಳ್ಳುವವರೆಗೂ ಯೋಜನೆಯನ್ನು ತಡೆಹಿಡಿಯುವುದಾಗಿ ಘೋಷಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರು ತಮ್ಮ ಹೇಳಿಕೆಯ ಬಿಸಿ ಎದುರಿಸುತ್ತಿದ್ದಾರೆ.
ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿ ಜನರಿಗೆ ದ್ರೋಹ ಮಾಡಿದ ಮುಖ್ಯಮಂತ್ರಿ ರಾಜೀನಾಮೆ ನೀಡುವಂತೆ ಮಾಜಿ ಮುಖ್ಯಮಂತ್ರಿ, ಪ್ರಧಾನ ಪ್ರತಿಪಕ್ಷ ನಾಯಕಿ ಜೆ.ಜಯಲಲಿತಾ ಅವರು ಒತ್ತಾಯಿಸಿದ್ದಾರೆ.
ತಮ್ಮ ಪುತ್ರಿ ಕಾನಿಮೋಳಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ದೊರಕಿಸುವುದಕ್ಕೆ ಪ್ರತಿಯಾಗಿ ಚೌಕಾಶಿಯಲ್ಲಿ ತೊಡಗಿದ ಕರುಣಾನಿಧಿ ಅವರು, ಯೋಜನೆ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಕೇಂದ್ರದ ಒತ್ತಡಕ್ಕೆ ಮಣಿದಿದ್ದಾರೆ ಎಂದು ಜಯಾ ಆರೋಪಿಸಿದ್ದಾರೆ.
ನಮ್ಮ ಯೋಜನೆಗಳ ಬಗ್ಗೆ ನಿರ್ಧರಿಸಲು ಕರುಣಾನಿಧಿ ಅವರು ಕರ್ನಾಟಕಕ್ಕೆ ಹಕ್ಕುಗಳನ್ನು ನೀಡಿದ್ದಾರೆಯೇ? ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಮಂಗಳವಾರ ಜಯಾ ಒತ್ತಾಯಿಸಿದರು.
ತಮಿಳುನಾಡು ವಿಧಾನಸಭೆಯ ಪ್ರಶ್ನಾ ಅವಧಿಯಲ್ಲಿ ವಿಶೇಷ ನಿಲುವಳಿ ಗೊತ್ತುವಳಿ ಮಂಡಿಸಲು ಸ್ಪೀಕರ್ ಎ.ಅವಿದೈಯಪ್ಪನ್ ಅವರು ನಿರಾಕರಿಸಿದ ಬಳಿಕ, ಎಐಎಡಿಎಂಕೆ ಸದಸ್ಯರ ಸಭಾತ್ಯಾಗದ ನೇತೃತ್ವ ವಹಿಸಿದ ಜಯಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಯೋಜನೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಾ.27 ಹಾಗೂ ಏ.1ರಂದು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಏ.5ರಂದು, ಸದನದ ಅಧಿವೇಶನ ಇರುವಂತೆಯೇ, ಮುಖ್ಯಮಂತ್ರಿ ಏಕಪಕ್ಷೀಯ ಹೇಳಿಕೆ ನೀಡಿ ಅಚ್ಚರಿ ಹುಟ್ಟಿಸಿದ್ದಾರೆ ಎಂದರು.
|