ಎಐಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಎಂ.ವೀರಪ್ಪ ಮೊಯಿಲಿ ಮಾತು ಬದಲಿಸಿದ್ದಾರೆ. ಹೊಗೇನಕಲ್ ಯೋಜನೆಯನ್ನು ತಡೆಹಿಡಿದದ್ದು ಕರುಣಾನಿಧಿಯೇ ಹೊರತು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಧ್ಯಪ್ರವೇಶಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿ ಮಂಗಳವಾರ ತಾವು ನೀಡಿದ ಹೇಳಿಕೆಗೆ ವ್ಯತಿರಿಕ್ತವಾಗಿ ಮೊಯಿಲಿ, ಹೊಗೇನಕಲ್ ಯೋಜನೆ ತಡೆಹಿಡಿಯಲು ಸೋನಿಯಾ ಅವರು ಕರುಣಾನಿಧಿ ಜತೆಗೆ ಖಾಸಗಿ ಮಾತುಕತೆ ನಡೆಸಿದ್ದರು ಎಂಬ ಭಾವನೆ ಮೂಡಿಸಲಾಗಿದೆ ಎಂದು ಬುಧವಾರ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಯೋಜನೆ ಸ್ಥಗಿತಕ್ಕೆ ಸೋನಿಯಾ ಅವರು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯನ್ನು ಕೋರಿದ್ದರು ಎಂದು ಮೊಯಿಲಿ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದರು. ಇಂದು ಸ್ಪಷ್ಟನೆ ನೀಡಿರುವ ಮೊಯಿಲಿ, ಕರ್ನಾಟಕದಲ್ಲಿ ಯಾವುದೇ ಚುನಾಯಿತ ಸರಕಾರ ಇಲ್ಲ ಎಂಬುದನ್ನು ಮನಗಂಡು ಇದು ಕರುಣಾನಿಧಿಯವರೇ ತೆಗೆದುಕೊಂಡ ನಿರ್ಧಾರ ಎಂದು ಹೇಳಿದ್ದಾರೆ.
ಕರ್ನಾಟಕ ಮತ್ತು ತಮಿಳುನಾಡು ನಡುವಣ ಈ ವಿವಾದಕ್ಕೆ ಸಹಮತದ ಪರಿಹಾರ ದೊರೆಯಬೇಕೆಂಬುದು ಸೋನಿಯಾ ಆಶಯ. ಉಭಯ ರಾಜ್ಯಗಳ ಜನರ ಮಧ್ಯೆ ಸೌಹಾರ್ದಯುತ ಮತ್ತು ಶಾಂತಿಯುತ ಸಂಬಂಧದ ಬಗ್ಗೆ ಅವರು ಕಾಳಜಿ ಹೊಂದಿದ್ದಾರೆ ಎಂದು ಮೊಯಿಲಿ ನುಡಿದರು.
|