ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗದವರಿಗೆ (ಒಬಿಸಿ) ನೀಡಲಾದ ಶೇ.27 ಮೀಸಲಾತಿ ನಿರ್ಧಾರವನ್ನು ಸುಪ್ರೀಂ ಕೋರ್ಟು ಎತ್ತಿ ಹಿಡಿದಿದೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಎಐಐಎಂಎಸ್ ಮುಂತಾದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಬಿಸಿ ಕೋಟಾ ನೀಡಲು ಕೇಂದ್ರ ಸರಕಾರಕ್ಕೆ ನ್ಯಾಯಯುತ ಹಕ್ಕಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಈ ಕೋಟಾ ನೀಡುವ ವಿರುದ್ಧ ಹಲವು ಅರ್ಜಿಗಳು ದಾಖಲಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟು 2007ರಲ್ಲಿ ಈ ಮೀಸಲಾತಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. ಸರಕಾರವು 1931 ಜನಗಣತಿ ಪ್ರಕಾರ ಕೋಟಾ ನಿರ್ಧರಿಸಿದೆ ಎಂಬುದು ಈ ಅರ್ಜಿಗಳಲ್ಲಿದ್ದ ಪ್ರಮುಖ ಅಂಶವಾಗಿತ್ತು. ಕೆನೆಪದರ ವಿಭಾಗದವರು ಮೀಸಲಾತಿ ಲಾಭ ಪಡೆಯುವಂತಿಲ್ಲ ಮತ್ತು ಒಬಿಸಿ ಕೋಟಾವು ಸಮಾಜವನ್ನು ಒಡೆಯುತ್ತದೆ ಎಂಬುದೂ ಈ ಅರ್ಜಿಗಳ ವಾದವಾಗಿತ್ತು.
ಒಬಿಸಿ ಕೋಟಾ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಆದರೆ ಶೇ.27 ಕೋಟಾವನ್ನು ಸಂಸತ್ತು ಸರ್ವಾನುಮತದಿಂದ ಅಂಗೀಕರಿಸಿತ್ತು. ಇದೀಗ ನ್ಯಾಯಾಲಯದ ತೀರ್ಮಾನದ ಹಿನ್ನೆಲೆಯಲ್ಲಿ ಶೇ.27 ಕೋಟಾ 2008ರಿಂದ ಜಾರಿಗೆ ಬರುವ ಸಾಧ್ಯತೆಗಳಿವೆ.
|