ಇತರ ಹಿಂದುಳಿದ ವರ್ಗಗಳಿಗೆ ಶೇ.27 ಮೀಸಲಾತಿ ನೀಡಿಕೆ ವಿಚಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದರಿಂದ ತನ್ನ ನಿಲುವು ಸಮರ್ಥಿಸಿದಂತಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಅರ್ಜುನ್ ಸಿಂಗ್ ಹೇಳಿದ್ದಾರೆ.
ಇದೊಂದು ಐತಿಹಾಸಿಕ ತೀರ್ಪು, ಇದರಿಂದಾಗಿ ಇತರ ಹಿಂದುಳಿದ ವರ್ಗಗಳ ಸಾವಿರಾರು ವಿದ್ಯಾರ್ಥಿಗಳು ಅನುಕೂಲ ಪಡೆಯಲಿದ್ದಾರೆ ಎಂದು, ಎರಡು ವರ್ಷಗಳ ಹಿಂದೆ ಕೇಂದ್ರೀಯ ಶೈಕ್ಷಣಿಕ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡುವ ಯೋಜನೆಯನ್ನು ಮಂಡಿಸಿದ ಅರ್ಜುನ್ ಸಿಂಗ್ ಹೇಳಿದ್ದಾರೆ.
"ಆರೋಪಮುಕ್ತ ಭಾವನೆ ನನಗುಂಟಾಗಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿಯಾದಾಗಿನಿಂದ ಇದಕ್ಕಾಗಿ ನಾನು ಹೋರಾಡುತ್ತಿದ್ದೇನೆ. ಜನತೆ ಮೀಸಲಾತಿಯ ಕುರಿತು ತಪ್ಪು ತಿಳಿದುಕೊಂಡಿದ್ದಾರೆ" ಎಂದು ಅವರು ನ್ಯಾಯಾಲಯದ ತೀರ್ಪು ಹೊರಬಿದ್ದ ಬಳಿಕ ಪ್ರತಿಕ್ರಿಯಿಸಿದ್ದಾರೆ.
ಮುಂಬರುವ ಶೈಕ್ಷಣಿಕ ವರ್ಷದಿಂದ ಶೇ.27 ಕೋಟಾವನ್ನು ಕೇಂದ್ರ ಸರಕಾರ ಜಾರಿಗೆ ತರಲಿದೆ ಎಂದು ಅವರು ಹೇಳಿದರು. ಉನ್ನತ ಶಿಕ್ಷಣದಲ್ಲಿ ಸಮಾನತೆ ಬಯಸುವ ಪ್ರತಿಯೊಬ್ಬರು ಈ ತೀರ್ಪನ್ನು ಬೆಂಬಲಿಸಲಿದ್ದಾರೆ ಎಂದು ಸಿಂಗ್ ಅಭಿಪ್ರಾಯಿಸಿದ್ದಾರೆ.
|