ಇತರ ಹಿಂದುಳಿದ ವರ್ಗದವರಿಗೆ ಶೇ.27 ಮೀಸಲಾತಿ ಕುರಿತು ಸುಪ್ರೀಂ ಕೋರ್ಟು ಗುರುವಾರ ನೀಡಿದ ತೀರ್ಪನ್ನು ಸ್ವಾಗತಿಸಿರುವ ಬಿಎಸ್‌ಪಿ ಮುಖ್ಯಸ್ಥೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ, ಮೇಲ್ಜಾತಿಯವರಲ್ಲಿಯೂ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕು ಎಂದು ಧ್ವನಿಯೆತ್ತಿದ್ದಾರೆ.
ಇದಲ್ಲದೆ, ಧಾರ್ಮಿಕ ಅಲ್ಪಸಂಖ್ಯಾತರಲ್ಲೂ ಬಡವರಿಗೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿರುವ ಮಾಯಾವತಿ, ಹಣದುಬ್ಬರ ದರ ಏರಿಕೆ ಹಾಗೂ ಜೀವನ ನಿರ್ವಹಣಾ ವೆಚ್ಚ ಏರಿಕೆಯ ಹಿನ್ನೆಲೆಯಲ್ಲಿ 'ಕೆನೆಪದರ'ದ ವ್ಯಾಖ್ಯಾನವನ್ನು ಪರಿಷ್ಕರಿಸಬೇಕು ಎಂದೂ ಆಗ್ರಹಿಸಿದ್ದಾರೆ.
ಮೇಲ್ಜಾತಿ ಹಾಗೂ ಧಾರ್ಮಿ ಅಲ್ಪಸಂಖ್ಯಾತ ಸಮುದಾಯದಲ್ಲಿರುವ ಆರ್ಥಿಕವಾಗಿ ಹಿಂದುಳಿದವರಿಗೂ ಮೀಸಲಾತಿ ಕಲ್ಪಿಸುವಂತೆ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಮಾಧ್ಯಮಗಳಿಗೆ ತಿಳಿಸಿರುವ ಅವರು, ಇದಕ್ಕೆ ಸಾಂವಿಧಾನಿಕ ತಿದ್ದುಪಡಿಯಾಗಬೇಕು, ಈ ಕುರಿತ ಯಾವುದೇ ಪ್ರಯತ್ನಕ್ಕೆ ಸಂಸತ್ತಿನಲ್ಲಿ ಬಿಎಸ್ಪಿ ಬೆಂಬಲಿಸುತ್ತದೆ ಎಂದು ಹೇಳಿದರು.
|