ಗಾಂಧಿನಗರ: ಗುಜರಾತಿನಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ನಂತರದ ಕರೆಯಲಾಗಿದ್ದ ಪ್ರಥಮ ಅಧಿವೇಶನ ಇತ್ತೀಚೆಗೆ ಕೊನೆಗೊಂಡಿದ್ದು, ಅಧಿವೇಶನದ ಒಂದೇ ಒಂದು ಗಂಟೆಯೂ ಅನವಶ್ಯಕವಾಗಿ ಪೋಲಾಗಿಲ್ಲ ಎಂದು ಹೇಳಿರುವ ಸ್ಪೀಕರ್ ಅಶೋಕ್ ಭಟ್, ರಾಷ್ಟ್ರಾದ್ಯಂತ ಕಾನೂನು ನಿರ್ಮಾಪಕರಿಗೆ ಇದೊಂದು ನಿದರ್ಶನವಾಗಿದೆ ಎಂದು ಹೇಳಿದ್ದಾರೆ.
ಜನವರಿ 18ರಿಂದ ಆರಂಭಗೊಂಡು ಮಾರ್ಚ್ 26ರಂದು ಅಂತ್ಯಗೊಂಡ ಅಧಿವೇಶನದುದ್ದಕ್ಕೂ, ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಅಭೂತಪೂರ್ವ ಸಹನೆ ಮತ್ತು ಸೌಹಾರ್ದತೆ ಮೆರೆದಿದ್ದಾರೆ ಎಂದು ಭಟ್ ಹೇಳಿದ್ದಾರೆ. ಈ ಅಧಿವೇಶನದಲ್ಲಿ ನಾಲ್ಕು ಮಸೂದೆಗಳು ಮತ್ತು ಮೂರು ನಿರ್ಣಯಗಳು ಅವಿರೋಧವಾಗಿ ಅಂಗೀಕಾರಗೊಂಡಿದ್ದು ಇದು ಅಪರೂಪದಲ್ಲಿ ಅಪರೂಪದ್ದಾಗಿದೆ, ಮುಂದೂಡಿಕೆ ಅಥವಾ ಕಲಹಗಳ ಹಿನ್ನೆಲೆಯಲ್ಲಿ ಅಧಿವೇಶನದ ಸಮಯವನ್ನು ವಿಸ್ತರಿಸಲಿಲ್ಲ ಎಂದೂ ಅವರು ಹೇಳಿದ್ದಾರೆ.
ತಾನಿದನ್ನು ಪ್ರಯೋಗಾತ್ಮಕ ಆಧಾರದಲ್ಲಿ ಆರಂಭಿಸಿರುವುದಾಗಿ ಹೇಳಿದ ಭಟ್, ಅಧಿವೇಶನದ ಆರಂಭಕ್ಕೆ ಮುನ್ನ ಎಲ್ಲ ಸದಸ್ಯರನ್ನು ಸಂಪರ್ಕಿಸಿ ಸುಲಲಿತ ಕಾರ್ಯಚರಣೆಯ ಪ್ರಾಮುಖ್ಯತೆಯನ್ನು ಅವರಿಗೆ ಮನವರಿಕೆ ಮಾಡಿರುವುದಾಗಿ ಹೇಳುತ್ತಾ, ಶಾಸಕರ ವರ್ತನೆಯನ್ನು ಶ್ಲಾಘಿಸಿದ್ದಾರೆ.
ಗುಜರಾತ್ ರಾಜ್ಯವು ಅಸ್ತಿತ್ವಕ್ಕೆ ಬಂದ ಬಳಿಕ ಇದು 106ನೆಯ ಅಧಿವೇಶನವಾಗಿದೆ.
|