ಎರಡು ಬಾರಿ ಗುಟ್ಕಾ ಮೇಲೆ ನಿಷೇಧ ಹೇರಲು ಪ್ರಯತ್ನಿಸಿ ವಿಫಲವಾಗಿದ್ದ ಮಹಾರಾಷ್ಟ್ರ ಸರಕಾರ, ಈಗ ಮತ್ತೊಮ್ಮೆ ಗುಟ್ಕಾ ನಿಷೇಧಕ್ಕೆ ಮುಂದಾಗಿದೆ. ಮೇ.20ರಿಂದ ಮಹಾರಾಷ್ಟ್ರದಲ್ಲಿ ಗುಟ್ಕಾ ನಿಷೇಧ ಜಾರಿಯಾಗಲಿದೆ. ಇದರೊಂದಿಗೆ ಕರ್ನಾಟಕದ ಅಡಕೆ ಮತ್ತು ತಂಬಾಕು ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ.
ಈ ಹಿಂದೆಯೂ ನಿಷೇಧ ಸಂದರ್ಭದಲ್ಲಿ ಅಡಕೆ ಹಾಗೂ ತಂಬಾಕು ಬೆಳೆಗಾರರು ಹೈಕೋರ್ಟ್ ಮೊರೆ ಹೋಗಿದ್ದ ಕಾರಣ, ಅಂದಿನ ಸರಕಾರವು ಗುಟ್ಕಾ ನಿಷೇಧ ಪ್ರಸ್ತಾಪವನ್ನು ಕೈಬಿಡಬೇಕಾಗಿಬಂದಿತ್ತು. ಈ ಬಾರಿ ಆ ರೀತಿಯಾಗುವ ಸಾಧ್ಯತೆಗಳು ಕಡಿಮೆ. ಯಾಕೆಂದರೆ, ಫೆ.5ರಂದು ಈ ಕುರಿತು ಕೇಂದ್ರ ಸರಕಾರವೇ ಅಧಿಸೂಚನೆ ಹೊರಡಿಸಿದೆ.
ತಂಬಾಕು ಹಾಗೂ ನಿಕೊಟಿನ್ ಮಿಶ್ರಣದ ಎಲ್ಲ ಆಹಾರವಸ್ತುಗಳನ್ನು ಮೇ.20ರಿಂದ ನಿಷೇಧ ಮಾಡಲಾಗುತ್ತದೆ ಎಂದು ಮಹಾರಾಷ್ಟ್ರ ಆಹಾರ ಸಚಿವ ಬಾಬಾ ಸಿದ್ದಿಕಿ ಅವರು ಭಾನುವಾರ ಹೇಳಿದ್ದಾರೆ. ಈ ಬಾರಿ ಗುಟ್ಕಾ ಲಾಬಿಗೆ ಮಣಿಯುವುದೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಸಿದ್ದಿಕಿ.
ಇದೀಗ ಗುಟ್ಕಾ ನಿಷೇಧವು ಕರ್ನಾಟಕದ ಮೇಲೂ ಪರಿಣಾಮ ಬೀರಲಿದೆ. ಇದಕ್ಕೆ ಪ್ರಧಾನ ಕಾರಣವೆಂದರೆ ಕರ್ನಾಟಕದಲ್ಲಿ ತಂಬಾಕು ಹಾಗೂ ಅಡಕೆ ಬೆಳೆ ಹೆಚ್ಚು. ರಾಜ್ಯದ ಉತ್ತರ ಭಾಗದಲ್ಲಿ ತಂಬಾಕು ಹಾಗೂ ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಅಡಕೆಯೇ ಜೀವನಾಧಾರವಾಗಿದೆ. ಇದರಿಂದ ಬೆಳೆಗಾರರಿಗೆ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆಗಳಿವೆ.
|