43 ವರ್ಷಗಳ ಬಳಿಕ ಕೋಲ್ಕತಾ ಮತ್ತು ಢಾಕಾ ನಡುವೆ ರೈಲು-ಸಂಬಂಧ ಮರು ಏರ್ಪಟ್ಟಿದ್ದು, ಸೋಮವಾರ ಎರಡೂ ಕಡೆಯಿಂದ 'ಮೈತ್ರಿ ಎಕ್ಸ್‌ಪ್ರೆಸ್' ರೈಲುಗಳಿಗೆ ಹಸಿರು ನಿಶಾನೆ ತೋರಲಾಯಿತು. ಇದರೊಂದಿಗೆ ಉಭಯ ರಾಷ್ಟ್ರಗಳ ನಡುವಣ ಬಾಂಧವ್ಯದ ಹೊಸ ಪುಟಕ್ಕೆ ಮುನ್ನುಡಿ ಬರೆಯಲಾಯಿತು.
ಶೃಂಗಾರಗೊಂಡ ಆರು ಕೋಚ್‌ಗಳೊಂದಿಗೆ ಕೋಲ್ಕತಾದಿಂದ ಬೆಳಗ್ಗೆ 7.10ಕ್ಕೆ ಈ ರೈಲು 15 ಗಂಟೆಗಳ ಯಾನವನ್ನು ಆರಂಭಿಸಿತು. ಬಂಗಾಳೀ ಹೊಸ ವರ್ಷಾರಂಭವಾದ ಸೋಮವಾರ, ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಅವರು ರಿಮೋಟ್ ಕಂಟ್ರೋಲ್ ಮೂಲಕ ರೈಲಿಗೆ ಹಸಿರು ನಶಾನೆ ತೋರಿದರು.
1965ರ ಭಾರತ-ಪಾಕ್ ಯುದ್ಧದ ಸಂದರ್ಭ ಉಭಯ ಪಟ್ಟಣಗಳ ನಡುವೆ ರೈಲು ಸಂಪರ್ಕ ಸ್ಥಗಿತಗೊಂಡಿತ್ತು. ಆಗ ಬಾಂಗ್ಲಾವು ಪಾಕಿಸ್ತಾನದ ಭಾಗವಾಗಿತ್ತು. ಆದರೆ ಭಾರತ-ಬಾಂಗ್ಲಾ ನಡುವೆ 1996ರಲ್ಲಿ ಬಸ್ ಸಂಪರ್ಕವನ್ನು ಬೆಸೆಯಲಾಗಿತ್ತು.
ಭಾರತದ 120 ಕಿ.ಮೀ. ಸೇರಿದಂತೆ 538 ಕಿ.ಮೀ. ರೈಲು ಮಾರ್ಗವನ್ನು ಈ ಮೈತ್ರಿ ಎಕ್ಸ್‌ಪ್ರೆಸ್ ಕ್ರಮಿಸಲಿದೆ. ಭಾರತೀಯ ರೈಲಿನಲ್ಲಿ 368 ಹಾಗೂ ಬಾಂಗ್ಲಾ ದೇಶದ ರೈಲಿನಲ್ಲಿ 418 ಆಸನ ಸಾಮರ್ಥ್ಯವಿದ್ದು, ಪ್ರತಿ ಶನಿವಾರ ಉಭಯ ದೇಶಗಳಿಂದ ಈ ರೈಲುಗಳು ಹೊರಡಲಿವೆ. ಮರುದಿನ ವಾಪಸ್ ಬರಲಿವೆ.
ಬಾಂಗ್ಲಾ ದೇಶೀ ವಲಸಿಗರಿಗೆ ಸೂಕ್ತ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಸ್ವಲ್ಪಹೊತ್ತು ಈ ರೈಲಿಗೆ ತಡೆಯೊಡ್ಡಲಾಯಿತು. ರೈಲು ತಡೆದ ಕಾರಣಕ್ಕೆ 11 ಮಹಿಳೆಯರೂ ಸೇರಿದಂತೆ 87 ಮಂದಿಯನ್ನು ಬಂಧಿಸಲಾಗಿದ್ದು, ರೈಲು ಯಾನ ಮುಂದುವರಿದಿದೆ.
|