ಮ್ಯಾರಥಾನ್ ಬಾಲಕ ಎಂದೇ ಖ್ಯಾತಿ ಪಡೆದಿರುವ ಬುಧಿಯಾ ಸಿಂಗ್‌ನ ಮಾಜಿ ಕೋಚ್ ಬಿರಾಂಚಿ ದಾಸ್ ಎಂಬವರನ್ನು ದುಷ್ಕರ್ಮಿಗಳು ಭಾನುವಾರ ಸಂಜೆ ಗುಂಡಿಟ್ಟು ಕೊಂದಿದ್ದು, ದೇಶಕ್ಕಾಗಿ ಒಲಿಂಪಿಕ್ ಪದಕ ಗೆಲ್ಲುವ ತನ್ನ ಕನಸುಗಳು ಚದುರಿವೆ ಎಂದು ಬುಧಿಯಾ ಪ್ರತಿಕ್ರಿಯಿಸಿದ್ದಾನೆ.
ಜೀವಮಾನವಿಡೀ ತನ್ನನ್ನು ಈ ಅಗಲಿಕೆಯ ನೋವು ಕಾಡಲಿದೆ. ಅವರು ನನ್ನ ತಂದೆಯ ಸ್ಥಾನ ತುಂಬಿದ್ದರು ಎಂದು ಕಣ್ಣೀರಿಡುತ್ತಾ ಆರರ ಹರೆಯದ ಬುಧಿಯಾ ಸಿಂಗ್ ಹೇಳಿದ್ದಾನೆ. ಕೋಚ್ ಜತೆ ಬುಧಿಯಾ ತಾಯಿಗೆ ಭಿನ್ನಾಭಿಪ್ರಾಯ ಬಂದ ಬಳಿಕ, ಆತನನ್ನು ಕ್ರೀಡಾ ಹಾಸ್ಟೆಲ್‌ಗೆ ಸೇರಿಸಲಾಗಿತ್ತು.
ದಾಸ್ ಅವರು ನನ್ನನ್ನು ಮಗನಂತೆ ನೋಡಿಕೊಳ್ಳುತ್ತಿದ್ದರು ಎಂದು ಮೂರು ವರ್ಷದವನಿದ್ದಾಗಲೇ ತಂದೆಯನ್ನು ಕಳೆದುಕೊಂಡಿದ್ದ ಬುಧಿಯಾ ರೋದಿಸಿದ್ದಾನೆ.
ತನ್ನ ಹೆಸರು ಲಿಮ್ಕಾ ದಾಖಲೆಗಳ ಪುಸ್ತಕದಲ್ಲಿ ದಾಖಲಾಗಲು ದಾಸ್ ಅವರೇ ಕಾರಣ. ಆದರೆ 2019ರ ಒಲಿಂಪಿಕ್ಸ್‌ನಲ್ಲಿ ತನಗೆ ಪದಕ ದೊರಕಿಸಿಕೊಡುವ ಅವರ ಭರವಸೆಯನ್ನು ಈಡೇರಿಸಲು ದಾಸ್‌ಗೆ ಸಾಧ್ಯವಾಗಲಿಲ್ಲವಲ್ಲಾ ಎಂದು ವಿಷಾದಿಸಿದ್ದಾನೆ.
ಜೂಡೋ ಕೋಚ್ ಆಗಿದ್ದ ಬಿರಾಂಚಿ ದಾಸ್ ಅವರನ್ನು ಅಪರಿಚಿತ ಬಂದೂಕುಧಾರಿಗಳು ಭಾನುವಾರ ಸಂಜೆ ಗುಂಡಿಟ್ಟು ಕೊಂದಿದ್ದರು.
|