"ಕಟ್ಟಕಡೆಯ ಕ್ಷಣದ ತನಕವೂ ಹತ್ಯಾ ಯೋಜನೆಯ ಕುರಿತು ತನಗೇನೂ ತಿಳಿದಿರಲಿಲ್ಲ" ಇದು ರಾಜೀವ್ ಗಾಂಧಿ ಹತ್ಯಾ ಬಳಗದಲ್ಲಿ ಬದುಕುಳಿದಿರುವ ಏಕೈಕ ಅಪರಾಧಿ ನಳಿನಿ ಶ್ರಿಹರನ್ ಹೇಳಿಕೆ. ಈ ಹೇಳಿಕೆ ಇತ್ತೀಚೆಗೆ ಪ್ರಿಯಾಂಕಾ ಗಾಂಧಿ ವೆಲ್ಲೂರು ಜೈಲಿನಲ್ಲಿ ನಳಿಯನ್ನು ಭೇಟಿಯಾದಾಗ ಹೊರಬಿದ್ದಿದೆ ಎಂದು ಮೂಲಗಳು ಹೇಳಿವೆ.
ಮಾರ್ಚ್ 19ರಂದು ಪ್ರಿಯಾಂಕ ಗಾಂಧಿ ನಳಿನಿಯನ್ನು ಭೇಟಿಯಾಗಿದ್ದಾರೆ ಎಂಬ ಅಂಶವನ್ನು ನಳಿನಿಯ ವಕೀಲರು ದೃಢಪಡಿಸಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯನ್ವಯ ಡಿ. ರಾಜ್‌ಕುಮಾರ್ ಎಂಬ ವಕೀಲರು ಈ ಭೇಟಿಯ ಕುರಿತು ದೃಢೀಕರಣ ಕೇಳಿರುವ ಹಿನ್ನೆಲೆಯಲ್ಲಿ ಈ ವಿಚಾರವನ್ನು ದೃಢಪಡಿಸಲಾಗಿದೆ.
ಚೆನ್ನೈ ಸಮೀಪದ ಶ್ರಿಪೆರಂಬದೂರಿನಲ್ಲಿ, ತನ್ನ ತಂದೆ ರಾಜೀವ್ ಗಾಂಧಿಯನ್ನು ಯಾಕಾಗಿ ಹತ್ಯೆಮಾಡಲಾಯಿತು ಎಂಬ ಅಂಶವನ್ನು ತಿಳಿಯಲು ಪ್ರಿಯಾಂಕ ಬಯಸಿದ್ದರು. ತನ್ನ ತಂದೆ ಒಬ್ಬ 'ಒಳ್ಳೆಯ ವ್ಯಕ್ತಿ' ಅವರನ್ನ್ಯಾಕೆ ಹತ್ಯೆ ಮಾಡಿದ್ದೀರಿ?, ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಬಹುದಿತ್ತು ಎಂಬುದಾಗಿ ಪ್ರಿಯಾಂಕ ಮಾತುಕತೆಯ ವೇಳೆ ಹೇಳಿದ್ದಾರೆನ್ನಲಾಗಿದೆ.
ರಾಜೀವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಳಿನಿಗೆ ಮರಣ ದಂಡನೆ ವಿಧಿಸಲಾಗಿತ್ತಾದರೂ, ಬಳಿಕ ಸೋನಿಯಾ ಗಾಂಧಿ ನಳಿನಿಯ ಐದು ವರ್ಷದ ಮಗುವಿಗಾಗಿ ಕ್ಷಮಾದಾನ ಯಾಚಿಸಿದ್ದ ಕಾರಣ, ನಳಿನಿಯ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲಾಗಿತ್ತು.
ನಳಿನಿಯ ವಕೀಲರಾದ ಎಸ್. ದುರೈಸಾಮಿ ಮತ್ತು ಇಳಂಗೋವನ್ ಅವರುಗಳು ಈ ಭೇಟಿಯನ್ನು ದೃಢಪಡಿಸಿದ್ದಾರೆ. ಸಮಾರು ಒಂದು ಗಂಟೆಕಾಲ ಪ್ರಿಯಾಂಕ ಮತ್ತು ನಳಿನಿ ಮಾತುಕತೆ ನಡೆಸಿದ್ದು ಇದು ಸೌಹಾರ್ದ ಮಾತುಕತೆಯಾಗಿತ್ತು ಎಂದು ಅವರು ಹೇಳಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆ ಮೂಲಕ ಮಾಹಿತಿ ಯಾಚಿಸಿರುವ ರಾಜ್ ಕುಮಾರ್ ಈ ಭೇಟಿಯ ಕುರಿತು ಹಲವಾರು ಪ್ರಶ್ನೆಗಳನ್ನು ಎತ್ತಿದ್ದು, ಅಪರಾಧಿಯ ಭೇಟಿಗೆ ನ್ಯಾಯಾಲಯದ ಪೂರ್ವಾನುಮತಿ ಅಗತ್ಯವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಪ್ರಿಯಾಂಕ ಹಾಗೂ ನಳಿನಿ ನಿರ್ದಿಷ್ಟವಾಗಿ ಯಾವ ವಿಷಯವನ್ನು ಚರ್ಚಿಸಿದ್ದಾರೆ ಮತ್ತು ಎಷ್ಟುಹೊತ್ತು ಮಾತುಕತೆ ನಡೆಸಿದ್ದಾರೆ ಎಂದೂ ಪ್ರಶ್ನಿಸಿದ್ದಾರೆ.
|