ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಡವರಿಗೆ ಕಲರ್ ಟಿವಿ ನೀಡುವ ಆಮಿಷ ಒಡ್ಡಿರುವ ಕಾಂಗ್ರೆಸ್‌ನ ಸಂವಿಧಾನ ವಿರೋಧಿ ಕ್ರಮವನ್ನು ಪ್ರಶ್ನಿಸಿ ಚೆನ್ನೈ ವಕೀಲರೊಬ್ಬರು ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಜನರ ಪ್ರತಿನಿಧಿ ಕಾಯ್ದೆಯ 1951ರ ಸೆಕ್ಷನ್ 123(1)ರ ಪ್ರಕಾರ ಕಾಂಗ್ರೆಸ್‌ನ ಈ ಕ್ರಮವು ಭ್ರಷ್ಟ ನಡವಳಿಕೆಯಾಗಿದೆ ಎಂದು ದೂರಿರುವ ವಕೀಲ ಎಸ್.ಸುಬ್ರಮಣಿಯಂ ಬಾಲಾಜಿ ಸಾರ್ವಜನಿಕ ಉದ್ದೇಶಗಳಿಗೆ ಖಾಸಗಿ ಉಡುಗೊರೆಯು ಸಂವಿಧಾನದ ಕಲಂ 173(ಎ) ಉಲ್ಲಂಘನೆಯಾಗಿದೆ ಎಂದು ಹೇಳಿದ್ದು ಈ ಕುರಿತು ತಕ್ಷಣ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಸುಬ್ರಮಣಿಯಂ ಅವರು ಚೆನ್ನೈನಲ್ಲಿ ವೃತ್ತಿ ನಡೆಸುತ್ತಿದ್ದಾರೆ.
ಕಲರ್ ಟಿವಿ ನೀಡುವ ಆಮಿಷವು ಜನತೆಯ ಮೇಲೆ ಪ್ರಭಾವ ಬೀರಲಿದ್ದು, ಮತನೀಡುವಂತೆ ಪ್ರಚೋದಿಸುತ್ತದೆ ಎಂದು ವಕೀಲರು ತಮ್ಮ ದೂರಿನಲ್ಲಿ ಹೇಳಿದ್ದಾರೆ. ಮನೋರಂಜನೆಯು ಜನತೆಯ ಖಾಸಗಿ ವಿಚಾರವಾಗಿದೆಯೇ ವಿನಹ, ಮನರಂಜನೆ ಒದಗಿಸುವುದು ಕೇಂದ್ರ ಅಥವಾ ರಾಜ್ಯ ಸರಕಾರಗಳ ಕರ್ತವ್ಯವಲ್ಲ, ಹೀಗಿರುವಾಗ ಚುನಾವಣಾ ಭರವಸೆಯಾಗಿ ಯಾವುದೇ ಪಕ್ಷಕ್ಕೆ ಇಂತಹ ಅಸಾಂವಿಧಾನಿಕ ಭರವಸೆಗಳನ್ನು ನೀಡುವ ಹಕ್ಕಿಲ್ಲ ಎಂದು ಅರ್ಜಿದಾರರು ತನ್ನ ದೂರಿನಲ್ಲಿ ವಾದಿಸಿದ್ದಾರೆ.
ಮನೋರಂಜನೆಯು ಎಂದಿಗೂ ರಾಜ್ಯ ಅಥವಾ ರಾಷ್ಟ್ರದ ಸಾರ್ವಭೌಮ ಕಾರ್ಯವಾಗಿರಲಿಲ್ಲ, ಆಗಿಲ್ಲ ಮತ್ತು ಆಗುವುದೂ ಇಲ್ಲ. ಹೀಗಿರುವಾಗ ಸರಕಾರಿ ಬೊಕ್ಕಸದ ಹಣದಿಂದ ಮನೋರಂಜನೆ ಒದಗಿಸುವ ಆಮಿಷವು ಭಾರತೀಯ ದಂಡ ಸಂಹಿತೆಯ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು ಭಾರತೀಯ ದಂಡಸಂಹಿತೆಯ ಪ್ರಕಾರ ಇಂತಹ ಪಕ್ಷಗಳನ್ನು ಆರು ವರ್ಷಗಳ ಕಾಲ ಚುನಾವಣೆಗೆ ಸ್ಫರ್ಧಿಸುವುದರಿಂದ ಅನರ್ಹಗೊಳಿಸಬಹುದಾಗಿದೆ ಎಂದು ಹೇಳಿದ್ದಾರೆ.
ಇಂತಹ ಭ್ರಷ್ಟ ಕ್ರಮಗಳು ಮುಂದುವರಿದಲ್ಲಿ ಮುಂದೆ, ಇತರ ವಿರೋಧ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಫ್ರಿಜ್, ಮಿಕ್ಸಿ, ಫ್ಯಾನ್, ಇಸ್ತ್ರಿಪೆಟ್ಟಿಗೆ ಮೊಬೈಲ್ ಫೋನ್, ದ್ವಿಚಕ್ರವಾಹನ ಮುಂತಾದುವುಗಳ ಆಮಿಷ ಒಡ್ಡಿದರೂ ಹೆಚ್ಚಲ್ಲ ಎಂದು ಸುಬ್ರಮಣಿಯಂ ಹೇಳಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು, ಸೇನೆ, ಅಗತ್ಯ ಸೇವೆಗಳ ಕುರಿತ ಕಾಳಜಿ, ಆಹಾರ, ವಸ್ತ್ರ, ಆಶ್ರಯ, ವಿದ್ಯುತ್, ಮೂಲಸೌಕರ್ಯ, ಸಂವಹನ ಇವೇ ಮುಂತಾದುವುಗಳನ್ನು ಒದಗಿಸುವುದು ಸರಕಾರದ ಕರ್ತವ್ಯವಾಗಿದೆ ವಿನಹ ಉಚಿತ ಉಡುಗೋರೆ ನೀಡುವುದಲ್ಲ ಎಂದು ಹೇಳಿದ್ದಾರೆ.
ಸಂಯುಕ್ತ ಪ್ರಗತಿಪರ ಮೈತ್ರಿಕೂಟದ ಅಂಗಪಕ್ಷವಾದ ಡಿಎಂಕೆಯು ತಮಿಳ್ನಾಡಿನಲ್ಲಿ ಈ ಪ್ರವೃತ್ತಿಯನ್ನು ಹುಟ್ಟುಹಾಕಿದ್ದು, ಆ ಸಮಯದಲ್ಲೇ ಈ ಕುರಿತು ದೂರು ನೀಡಲಾಗಿದ್ದರೂ ಚುನಾವಣಾ ಆಯೋಗವು ಯಾವುದೇ ಕ್ರಮ ಕೈಗೊಳ್ಳದೇ ಇರುವುದು, ಇದು ಕರ್ನಾಟಕಕ್ಕೆ ಹರಡಲು ಕಾರಣವಾಗಿದೆ ಎಂದು ಅವರು ತನ್ನ ದೂರಿನಲ್ಲಿ ಆಪಾದಿಸಿದ್ದಾರೆ.
|