ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿಯನ್ನು ತಾನು ಮಾರ್ಚ್ 19ರಂದು ವೆಲ್ಲೂರು ಜೈಲಿನಲ್ಲಿ ಭೇಟಿಯಾಗಿರುವುದು ಹೌದು ಎಂದಿರುವ ರಾಜೀವ್ ಪುತ್ರಿ ಪ್ರಿಯಾಂಕಾ ಗಾಂಧಿ, ತನ್ನ ಬದುಕಿನ ಹಿಂಸೆಯಲ್ಲಿ ಶಾಂತಿ ಸ್ಥಾಪಿಸಲು ತಾನು ಈ ಕ್ರಮಕ್ಕೆ ಮುಂದಾಗಿರುವುದಾಗಿ ಹೇಳಿದ್ದಾರೆ.
ಇದು ತನ್ನ ವೈಯಕ್ತಿಕ ನಿರ್ಧಾರದಿಂದ ಮಾಡಿರುವ ಖಾಸಗಿ ಭೇಟಿಯಾಗಿದ್ದು, ತನ್ನ ತಂದೆಯನ್ನು ಗುರಿಯಾಗಿಸಲು ಕಾರಣವೇನೆಂಬುದನ್ನು ತಿಳಿಯಲು ತಾನು ಈ ಭೇಟಿಗೆ ಮುಂದಾಗಿರುವುದಾಗಿ ಹೇಳಿದ್ದಾರೆ.
ಏತನ್ಮಧ್ಯೆ, ತಾನು ನಳಿನಿಯನ್ನು ಭೇಟಿಯಾಗಲಾರೆ ಎಂದು ಪ್ರಿಯಾಂಕಾ ಸಹೋದರ ರಾಹುಲ್ ಗಾಂಧಿ ಹೇಳಿದ್ದಾರಾದರೂ, ಸಹೋದರಿಯ ಕ್ರಮವನ್ನು ಬೆಂಬಲಿಸಿದ್ದು, ತನ್ನ ಕುಟುಂಬವು ಕೋಪ ಹಾಗೂ ದ್ವೇಷವನ್ನು ಮುಂದುವರಿಸಲು ಇಚ್ಛಿಸುವುದಿಲ್ಲ ಎಂದಿದ್ದಾರೆ.
ರಾಜೀವ್ ಹತ್ಯಾ ಸಂಚಿನಲ್ಲಿ ಪಾಲ್ಗೊಂಡು ಶಿಕ್ಷೆಗೀಡಾಗಿರುವ ನಳಿನಿಯನ್ನು ನೋಡಲು ಇಚ್ಛಿಸುವಿರೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ರಾಹುಲ್, ತಾನು ಈ ವಿಚಾರವನ್ನು ವಿಭಿನ್ನ ರೀತಿಯಲ್ಲಿ ನೋಡುವುದಾಗಿ ಹೇಳಿದ್ದಾರೆ.
ಪ್ರಿಯಾಂಕ ಅವರು ನಳಿನಿಯನ್ನು ಭೇಟಿಯಾಗಿದ್ದಾರೆ ಎಂದು ಪತ್ರಿಕೆಯಲ್ಲಿ ಪ್ರಕಟವಾಗಿರುವ ವಿಚಾರದ ಕುರಿತು ಸಿಎನ್ಎನ್-ಐಬಿನ್‌ಗೆ ನೀಡಿರುವ ಹೇಳಿಕೆಯಲ್ಲಿ ಈ ವಿಚಾರವನ್ನು ಹೌದೆಂದು ಒಪ್ಪಿಕೊಂಡಿರುವ ಪ್ರಿಯಾಂಕಾ, ಹೆಚ್ಚಿನ ವಿವರ ನೀಡಲು ನಿರಾಕರಿಸಿದ್ದಾರರಲ್ಲದೆ, "ಇದು ವೈಯಕ್ತಿಕ ಭೇಟಿ. ನನ್ನ ಜೀವನ ಕಂಡಿರುವ ಎಲ್ಲಾ ಹಿಂಸಾಚಾರಗಳ ಜಾಗದಲ್ಲಿ ಶಾಂತಿಗಾಗಿ ಈ ಕ್ರಮಕ್ಕೆ ಮುಂದಾದೆ" ಎಂದು ಪ್ರಿಯಾಂಕ ಹೇಳಿದ್ದಾರೆ.
|