ಇಲ್ಲಿಗೆ ಸಮೀಪದ ಬೊಡೇಲಿ ಎಂಬಲ್ಲಿ ಬುಧವಾರ ನಸುಕಿನ ವೇಳೆ ಸಂಭವಿಸಿರುವ ಅಪಘಾತದಿಂದಾಗಿ, ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ 44 ಮಂದಿಯಲ್ಲಿ, 41 ಮೃತದೇಹಗಳು ಪತ್ತೆಯಾಗಿವೆ. ಸಾವಿಗೀಡಾದವರಲ್ಲಿ ಹೆಚ್ಚಿನವರು ವಿದ್ಯಾರ್ಥಿನಿಯರಾಗಿದ್ದಾರೆ.
ವಡೋದರ ಸಮೀಪದ ಬೊಡೇಲಿ ತಾಲೂಕಿನ ವಿವಿಧ ಗ್ರಾಮಗಳ ದುರ್ದೈವಿ ವಿದ್ಯಾರ್ಥಿಗಳು ತಾಲುಕು ಮುಖ್ಯಕಚೇರಿಯಲ್ಲಿ ನಡೆಯುತ್ತಿದ್ದ ವಾರ್ಷಿಕ ಪರೀಕ್ಷೆಗಾಗಿ ತೆರಳುತ್ತಿದ್ದರು ಎಂಬುದಾಗಿ ನೀರಾವರಿ ಸಂಪನ್ಮೂಲ ಸಚಿವ ನಿತಿನ್ ಪಟೇಲ್ ಹೇಳಿದ್ದಾರೆ.
ಈ ದುರ್ಘಟನೆಯ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಶವಗಳ ಮರಣೋತ್ತರ ಪರೀಕ್ಷೆ ನಡೆಸಿ ಅವರ ಸಂಬಂಧಿಗಳಿಗೆ ಒಪ್ಪಿಸುವುದು ಪ್ರಮುಖ ಆದ್ಯತೆಯಾಗಿದೆ ಎಂದು ಪಟೇಲ್ ಹೇಳಿದ್ದಾರೆ.
ಅಪಘಾತ ಸಂಭವಿಸಿರುವ ಸನಿಹದ ಆಸ್ಪತ್ರೆಯೊಂದರಲ್ಲಿ ವೈದ್ಯರ ತಂಡವು ಮರಣೋತ್ತರ ಪರೀಕ್ಷೆ ನಡೆಸುತ್ತಿದೆ. ಈಗಾಗಲೇ ಕೆಲವು ಮೃತದೇಹಗಳನ್ನು ಸಂಬಂಧಿಕರಿಗೆ ಒಪ್ಪಿಸಲಾಗಿದೆ. ಇದುವರೆಗೆ ಕಾಲುವೆಯಲ್ಲಿ ಮೂವರು ದೊಡ್ಡವರ ಮೃತದೇಹಗಳೂ ಪತ್ತೆಯಾಗಿವೆ.
ಇಂದು ನಸುಕಿನಲ್ಲಿ ಶಾಲಾಮಕ್ಕಳು ಹಾಗೂ ಶಿಕ್ಷಕರು ಸೇರಿದಂತೆ 60 ಮಂದಿ ತುಂಬಿದ್ದ ಗುಜರಾತ್ ಸಾರಿಗೆ ಸಂಸ್ಥೆ ಬಸ್ಸು ಸೇತುವೆ ಮೇಲೆ ಸಾಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ನರ್ಮದಾ ನದಿಗೆ ಉರುಳಿ ಬಿದ್ದು ಈ ದುರ್ಘಟನೆ ಸಂಭವಿಸಿದೆ.
ಅಪಘಾತದ ಕುರಿತು ತನಿಖೆ ನಡೆಸಲು ಐದು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ನೇಮಿಸಲಾಗಿದೆ ಎಂದು ಸಚಿವ ಪಟೇಲ್ ತಿಳಿಸಿದ್ದಾರೆ.
|