ಸ್ನೇಹಿತರು ಮತ್ತು ವೈರಿಗಳು ಎನ್ನುವ ತಾರತಮ್ಯವಿಲ್ಲದೇ, ಎಲ್ಲಾ ಪಕ್ಷಗಳೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಬೆಲೆ ಏರಿಕೆ ತಡೆಗಟ್ಟುವಿಕೆಯಲ್ಲಿ ವಿಫಲವಾಗಿದೆ ಎಂದು ದೂಷಿಸಿದ್ದು, ಹಿಗ್ಗಾಮುಗ್ಗಾ ಜಗ್ಗಿವೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ, ಸರಕಾರಕ್ಕೆ ಬಾಹ್ಯ ಬೆಂಬಲ ನೀಡುತ್ತಿರುವ ಎಡಪಕ್ಷಗಳು, ತಮ್ಮ ಈ ಪ್ರಯೋಗವು ವಿಫಲವಾಗಿದೆ ಎಂಬ ವಿಷಾದ ವ್ಯಕ್ತಪಡಿಸಿವೆ.
ಬೆಲೆಏರಿಕೆಯ ಕುರಿತು ವಿಶೇಷ ಚರ್ಚೆ ಆರಂಭಿಸಿದ ಸಿಪಿಐನ ಮುಖ್ಯಸ್ಥ ಗುರುದಾಸ್ ದಾಸ್‌ಗುಪ್ತಾ "ನಾವು ಅವರಿಗೆ ಕಳೆದ ನಾಲ್ಕು ವರ್ಷ ಕಾಲ ಬೆಂಬಲ ನೀಡಿದೆವು. ಆದರೆ ನಮ್ಮ ಪ್ರಯೋಗ ವಿಫಲವಾಗಿದೆ. ಸರಕಾರ ತನ್ನ ಆಡಳಿತದಲ್ಲಿ ವಿಫಲವಾಗಿದೆ" ಎಂದು ವಿಷಾದ ವ್ಯಕ್ತಪಡಿಸಿದರು.
"ಆಹಾರದ ಕೊರತೆ ಮತ್ತು ಬೆಲೆ ಏರಿಕೆಯು ಆಹಾರ ವಸ್ತುಗಳ ಕ್ಷೋಭೆ ಅಪಾಯದ ಶಂಕೆಯನ್ನು ಉಂಟು ಮಾಡಿದೆ" ಎಂದು ಹೇಳಿದ ಅವರು, ಸರಕಾರ ಜಾಗತಿಕ ಬೆಲೆ ಏರಿಕೆಯನ್ನು ರಕ್ಷಣಾ ಕವಚವನ್ನಾಗಿ ಬಳಸಿಕೊಳ್ಳುತ್ತಿರುವುದು ಸೂಕ್ತವಲ್ಲ, ಕಾಳಸಂತೆ ಹಾಗೂ ಅಕ್ರಮ ದಾಸ್ತಾನಿಗರ ಕಾಲ ಇದಾಗಿದೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಹಣದುಬ್ಬರ ನಿಂಯತ್ರಿಸಲು ಕಷ್ಟವಾಗುತ್ತಿದೆ ಎಂಬ ಪ್ರಧಾನಿ ಮನಮೋಹನ್ ಅವರ ಹೇಳಿಕೆಯನ್ನು ಅವರು ಈ ಸಂದರ್ಭದಲ್ಲಿ ಖಂಡಿಸಿದರು.
|