ಸಿಮೆಂಟ್ ಮತ್ತು ಉಕ್ಕು ಉದ್ಯಮವು ಅನುಭೋಗಿಗಳಿಂದ ಲಾಭಗಳಿಸುವ ಉದ್ದೇಶದಿಂದ ಹೊಸ ಒಪ್ಪಂದಗಳಿಗೆ ಪ್ರವೇಶಿಸುತ್ತಿವೆ ಎಂದು ಆಪಾದಿಸಿರುವ ಹಣಕಾಸು ಸಚಿವ ಪಿ.ಚಿದಂಬರಂ, ಬೆಲೆ ಏರಿಕೆಯನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಉಕ್ಕು ಮತ್ತು ಸಿಮೆಂಟ್ ಉತ್ಪಾದಕರ ವರ್ತನೆಯಲ್ಲಿ ಬದಲಾವಣೆಯಾಗದಿದ್ದಲ್ಲಿ, ಮಧ್ಯಪ್ರವೇಶ ಮಾಡಲು ಸರಕಾರವು ಹಿಂಜರಿಯುವುದಿಲ್ಲ ಎಂದು ಸಚಿವರು ಹೇಳಿದರು. ಅವರು ಲೋಕಸಭೆಯಲ್ಲಿ ಬೆಲೆ ಏರಿಕೆ ಕುರಿತು ನಡೆದ ಚರ್ಚೆಯಲ್ಲಿ ಮಧ್ಯಪ್ರವೇಶಿಸಿ ಮಾತನಾಡುತ್ತಿದ್ದರು.
ಬೆಲೆಏರಿಕೆಯ ನಿಯಂತ್ರಣಕ್ಕೆ ಕಂದಾಯವನ್ನು ಬಲಿಗೊಡಲೂ ಸರಕಾರ ಹೇಸಲು ಎಂದು ಸಚಿವ ಚಿದಂಬರಂ ಈ ಸಂದರ್ಭದಲ್ಲಿ ಹೇಳಿದರು. ಬೆಲೆ ಏರಿಕೆಯನ್ನು ಪ್ರತಿಭಟಿಸಿ ವಿಪಕ್ಷಗಳು ಸಭಾತ್ಯಾಗ ಮಾಡುತ್ತಿರುವಂತೆಯೇ, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಆಹಾರ ವಸ್ತುಗಳ ಬೆಲೆ ಹೆಚ್ಚಳವು ದೇಶಿಯ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿವೆ ಎಂದು ಅವರು ನುಡಿದರು.
ಪಿಡಿಎಸ್ ಮೂಲಕ ಖಾದ್ಯತೈಲಗಳು ಏತನ್ಮಧ್ಯೆ, ಸರಕಾರವು ಒಂದು ದಶಲಕ್ಷ ಟನ್ ಖಾದ್ಯತೈಲ ಹಾಗೂ 15ಲಕ್ಷ ಟನ್ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಂಡು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ವಿತರಿಸಲಾಗುವುದು ಎಂದು ಕೃಷಿ ಸಚಿವ ಶರದ್ ಪವಾರ್ ಹೇಳಿದ್ದಾರೆ. ಬೆಲೆ ಏರಿಕೆಯ ತಡೆಗೆ ಈ ಕ್ರಮಕ್ಕೆ ಮುಂದಾಗುವುದಾಗಿ ಹೇಳಿರುವ ಅವರು ಈ ತೈಲವನ್ನು ಲೀಟರೊಂದರ 15 ರೂಪಾಯಿಯಂತೆ ರಾಷ್ಟ್ರಾದ್ಯಂತ ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ವಿತರಿಸಲಾಗುವುದು ಎಂದು ಲೋಕ ಸಭೆಯಲ್ಲಿ ತಿಳಿಸಿದ್ದಾರೆ.
ತಜ್ಞರ ಸಮಿತಿ ವರದಿಯು 10 ದಿನಗಳಲ್ಲಿ ಬರದೇ ಇದ್ದಲ್ಲಿ, ಅಗತ್ಯವಸ್ತುಗಳ ಭವಿಷ್ಯದ ವ್ಯಾಪಾರವನ್ನು ನಿಷೇಧಿಸುವ ನಿರ್ಧಾರವನ್ನು ಸರಕಾರ ಕೈಗೊಳ್ಳಲಿದೆ ಎಂದು ಸಚಿವರು ಹೇಳಿದ್ದಾರೆ.
|