ಒರಿಸ್ಸಾ ವಿಧಾನ ಸಭೆಯಲ್ಲಿ ಕರ್ತವ್ಯ ನಿರತ ಮಹಿಳಾ ಮಾರ್ಷಲ್ ಓರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಸ್ಪೀಕರ್ ಮಹೇಶ್ವರ್ ಮೊಹಾಂತಿಯವರನ್ನು ಪೊಲೀಸರು ಶುಕ್ರವಾರ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಮಹಿಳಾ ಮಾರ್ಷಲ್ ಮೇಲೆ ನಡೆದ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಕಳೆದ ಒಂದು ವಾರದಿಂದ ಒರಿಸ್ಸಾ ವಿಧಾನಸಭೆಯ ಐವರು ಉದ್ಯೋಗಿಗಳ ಹೇಳಿಕೆಯನ್ನು ಪಡೆದು, ಮಹೇಶ್ವರ್ ಮೊಹಾಂತಿ ಅವರಿಗೆ ಪೊಲೀಸ್ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಮೋಹಾಂತಿ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಇರದ ಕಾರಣ ನೋಟಿಸ್‌ನ್ನು ಮೋಹಾಂತಿಯ ಸಹಾಯಕ ಸಿಬ್ಬಂದಿಗಳಿಗೆ ನೀಡಲಾಗಿದೆ.
ಮಹಿಳಾ ಮಾರ್ಷಲ್ ಗಾಯತ್ರಿ ಪಾಂಡಾ ನೀಡಿದ ದೂರಿನ ಅನ್ವಯ ವಿಧಾನ ಸಭೆಯ ಸ್ಪೀಕರ್ ಆಗಿರುವ ಮೋಹಾಂತಿ ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಈ ಹಿಂದೆ ದೂರು ಸಲ್ಲಿಸಿದ ನಂತರ ಆಪಾದಿತ ಸ್ಪೀಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಡಿಸಿಪಿ ಅಮಿತಾಭ್ ಠಾಕೂರ್ ಅವರು ಪ್ರಕರಣದ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದ್ದು, ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ಬಿಲಾಸಿನಿ ನಾಯಕ್ ಅವರು ಮೋಹಾಂತಿಯವರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ.
ಮಹೇಶ್ವರ್ ಮೋಹಾಂತಿಯವರನ್ನು ಪೊಲೀಸರು ಅವರ ಅಧಿಕೃತ ನಿವಾಸದಲ್ಲಿ ಇತರ ಐವರು ಸಹ ಅರೋಪಿಗಳ ಸಮಕ್ಷಮದಲ್ಲಿ ವಿಚಾರಣೆ ನಡೆಸಲಿದ್ದಾರೆ. ಆರೋಪಿಗಳ ಸ್ಥಾನದಲ್ಲಿ ಮೋಹಾಂತಿ ಅವರ ವಾಹನ ಚಾಲಕನ ಹೆಸರು ಸೇರಿಸಲಾಗಿದೆ.
|