ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಕಾರ್ಯದರ್ಶಿಯಾಗ ಕಾರ್ಯನಿರ್ವಹಿಸಿದ ಪಿಎಂ ನಾಯರ್ ಅವರು ಬರೆದಿರುವ ಪುಸ್ತಕದಲ್ಲಿ ಗವರ್ನರ್ ಹುದ್ದೆಯನ್ನು ಅಲಂಕರಿಸುವುದಕ್ಕೆ ನಿವೃತ್ತ ಕಾರ್ಯದರ್ಶಿಗಳು ಲಾಬಿ ಮಾಡುವುದರಲ್ಲಿ ಪ್ರಮುಖರಾಗಿದ್ದರು ಎಂದು ಹೇಳಿದ್ದಾರೆ.
'ದಿ ಕಲಾಮ್ ಎಫೆಕ್ಟ್: ಮೈ ಇಯರ್ಸ್ ವಿಥ್ ದಿ ಪ್ರೆಸಿಡೆಂಟ್ ಪುಸ್ತಕದಲ್ಲಿ ನಾಯರ್ ಅವರು "ತಾನೇ ಖುದ್ದಾಗಿ ಭಾರತೀಯ ಆಡಳಿತ ಸೇವೆಯಲ್ಲಿ ಇದ್ದು ನಿವೃತ್ತರಾದ ಅನೇಕ ಮುಖ್ಯ ಕಾರ್ಯದರ್ಶಿಗಳ ಸ್ವವಿವರವನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿದ್ದೇನೆ. ಭಾರತೀಯ ಆಡಳಿತ ವ್ಯವಸ್ಥೆಯಲ್ಲಿ ಗೌರವಾರ್ಹ ಸ್ಥಾನ ಪಡೆದಿರುವ ಐಎಎಸ್ ಹಿನ್ನೆಲೆಯಿಂದ ಬಂದ ಈ ಅಧಿಕಾರಿಗಳ ಲಾಬಿ ನೋಡಿ ನನಗೆ ನಾಚಿಕೆಯಾಗುತ್ತದೆ" ಎಂದಿದ್ದಾರೆ.
ಇದಲ್ಲದೇ ರಾಷ್ಟ್ರೀಯ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಯಿಂದ ಹಿಡಿದು ಭಾರತ ರತ್ನ ಪ್ರಶಸ್ತಿಗಳಿಗೆ ಸ್ವತಃ ತಮಗೆ ತಾವೇ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿಕೊಂಡವರಿದ್ದಾರೆ ಎಂದು ಅವರು ಹೇಳಿದ್ದಾರೆ.
ನಾಯರ್ ಅವರು ಬರೆದಿರುವ ಪುಸ್ತಕದಲ್ಲಿ ರಾಷ್ಟ್ರಪತಿಯಾಗಿ ಕಲಾಂ ಜನರ ಸಮಸ್ಯೆಗಳಿಗೆ ಯಾವ ರೀತಿ ಸ್ಪಂದಿಸುತ್ತಿದ್ದರು ಎನ್ನುವುದನ್ನು ಕೆಲವೇ ಉದಾಹರಣೆಗಳ ಮೂಲಕ ವಿವರಿಸಿದ್ದಾರೆ. ಕಲಾಂ ಅವರದ್ದು ಧನಾತ್ಮಕ ಚಿಂತನೆ ಮತ್ತು ಆದರ್ಶಗಳಿಗೆ ಕಟ್ಟು ಬಿಳುವ ವ್ಯಕ್ತಿತ್ವ ಎಂದು ಬಣ್ಣಿಸಿದ್ದಾರೆ.
ರಾಷ್ಟ್ರಪತಿಯಾಗಿ ಐದು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಸಮಯದಲ್ಲಿ ಕಲಾಂ ಅವರು ಕೇವಲ 52 ಜನ ತಮ್ಮ ಸಂಬಂಧಿಕರನ್ನು ಭೇಟಿಯಾಗಿದ್ದಾರೆ. ಈ ಅವರ ಭೇಟಿ ವೈಯಕ್ತಿಕವಾಗಿದ್ದ ಕಾರಣ ಈ ಭೇಟಿಯಲ್ಲಿ ಒಂದೇ ಒಂದು ಬಾರಿ ರಾಷ್ಟ್ರಪತಿಗಳ ಅಧಿಕೃತ ವಾಹನವನ್ನು ಬಳಸಿಲ್ಲ. ಒಟ್ಟಾರೆ ಸಂಬಂಧಿಕರಗಳ ವೈಯಕ್ತಿಕ ಭೇಟಿಯ ಸಂದರ್ಭದಲ್ಲಿ 3.52 ಲಕ್ಷ ರೂಗಳನ್ನು ತಮ್ಮ ಕೈಯಾರೇ ಖರ್ಚು ಮಾಡಿದ್ದಾರೆ ಎಂದು ನಾಯರ್ ಮಾಹಿತಿ ನೀಡಿದ್ದಾರೆ.
|