ಕೃಷಿ ಸಾಲ ಮನ್ನಾದ ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂದು ಸೋಮವಾರ ಸ್ಪಷ್ಟಪಡಿಸಿರುವ ಕೇಂದ್ರ ಸರಕಾರ, ಬಜೆಟ್‌ನಲ್ಲಿ ಘೋಷಿಸಿರುವ ಸಾಲ ಮನ್ನಾದ ಜಾರಿಗೆ ಪ್ರಯತ್ನಿಸಲಿದೆ ಎಂದು ಹೇಳಿದೆ.
"ಪ್ರಸ್ತುತ ಘೋಷಿಸಿರುವ ಯೋಜನೆಯು(60,000ಕೋಟಿ ರೂಪಾಯಿ ಕೃಷಿ ಸಾಲಮನ್ನಾ) ಪರಿಪೂರ್ಣಗೊಳ್ಳುವ ತನಕ ಹೊಸ ಜವಾಬ್ದಾರಿಯನ್ನು ಒಪ್ಪಿಕೊಳ್ಳುವ ಪರಿಸ್ಥಿತಿಯಲ್ಲಿ ನಾವಿಲ್ಲ" ಎಂದು ಕೃಷಿ ಸಚಿವ ಶರದ್ ಪವಾರ್ ಉಪಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಲೋಕಸಭೆಯಲ್ಲಿ ತಿಳಿಸಿದರು.
ಲೇವಾದೇವಿಗಾರರಿಂದ ಕೃಷಿಕರು ಪಡೆದಿರುವ ಸಾಲ ಮನ್ನಾ ಅಥವಾ ಕೃಷಿಸಾಲ ಮನ್ನಾ ಪ್ಯಾಕೇಜಿನಲ್ಲಿ ಹೇಳಲಾದ ಮಿತಿಗಿಂತ ಹೆಚ್ಚಿನ ಆಸ್ತಿ ಹೊಂದಿರುವವರನ್ನು ವ್ಯಾಪಿಸಲು ಸರಕಾರವು ಯಾವುದೇ ನಿರ್ದಿಷ್ಟ ಯೋಜನೆಯನ್ನು ಹೊಂದಿಲ್ಲ ಎಂದು ಪವಾರ್ ನುಡಿದರು.
ಮೊದಲಿಗೆ ಬಜೆಟ್‌ನಲ್ಲಿ ಹೇಳಲಾದ ಸಾಲಮನ್ನಾವನ್ನು ಜಾರಿಗೆ ತಂದು ಅದರ ಫಲಿತಾಂಶವನ್ನು ನೋಡೋಣ ಎಂದು ನುಡಿದ ಸಚಿವರು, ಶೇ.81ಕ್ಕಿಂತ ಅಧಿಕ ರೈತರು ಸಣ್ಣ ಮತ್ತು ಮಧ್ಯಮ ವರ್ಗದ ರೈತರಾಗಿದ್ದು ಇವರೆಲ್ಲರೂ ಪ್ಯಾಕೇಜಿನಡಿಯಲ್ಲಿ ಬರುತ್ತಾರೆ ಎಂದು ಹೇಳಿದರು.
ಕೃಷಿಸಾಲ ಮನ್ನಾ ಯೋಜನೆಯ ಮೂಲಕ ರೈತರನ್ನು ಮೋಸಮಾಡಲಾಗಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ಅವರು ತಳ್ಳಿಹಾಕಿದ್ದಾರೆ.
|