ಕಷ್ಟಕಾಲದಲ್ಲಿ ದೇವರಿಗೆ ಮೊರೆ ಹೋಗುವ ಮಂದಿ, ಕಷ್ಟಪರಿಹಾರಕ್ಕಾಗಿ ತಮ್ಮ ಶಕ್ತ್ಯಾನುಸಾರ ದೇವರಿಗೆ ಹರಕೆ ಕಟ್ಟಿಕೊಳ್ಳುತ್ತಾರೆ. ಸಂಕಟ ಪರಿಹಾರವಾದ ಬಳಿಕ ದೇವರ ಹರಕೆ ತೀರಿಸಿ ಧನ್ಯರಾಗುತ್ತಾರೆ.
ಅಕ್ಕಿ, ನಾಣ್ಯ, ಹೂವು ಸೇರಿದಂತೆ ಸಾವಿರಾರು ಭಕ್ತರು ತರಾವರಿಯ ತುಲಾಭಾರ ಮಾಡುವುದನ್ನು ಕೇಳಿದ್ದೇವೆ. ಆದರೆ ಗುರುವಾಯೂರಿನ ಶ್ರೀಕೃಷ್ಣ ದೇವಸ್ಥಾನದಲ್ಲಿ ಭಕ್ತರೊಬ್ಬರು ಪ್ಯಾರಾಸಿಟಮಲ್ ಮಾತ್ರೆಗಳಿಂದ ತುಲಾಭಾರ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಈ ದೇವಾಲಯದಲ್ಲಿ ತುಲಾಭಾರ ದಿನನಿತ್ಯವೂ ನಡೆಯುತ್ತದೆ. ಬಾಳೆಹಣ್ಣಿನಿಂದ ಹಿಡಿದು, ಬೆಲ್ಲದ ತನಕ ವಸ್ತುಗಳಿಂದ ಭಕ್ತರು ತುಲಾಭಾರ ಮಾಡಿಸಿಕೊಳ್ಳುತ್ತಾರೆ. ಆದರೆ ದೇವರಿಗೇ ಮಾತ್ರೆ ಅರ್ಪಿಸಿದ ವಿಚಾರಮಾತ್ರ ತೀರಾ ಹೊಸತು.
ತ್ರಿಶ್ಯೂರು ಜಿಲ್ಲೆಯ ಸತ್ಯನ್ ಕುಟ್ಟನ್ ಎಂಬವರು 72ಕೆ.ಜಿ ಮಾತ್ರೆಗಳನ್ನು ಈ ಸೇವೆಗಾಗಿ ಬಳಸಿದ್ದರು. ಅವರು ಕಳೆದ ಸಂಜೆ ದೇವಾಲಯ ಪಶ್ಚಿಮ ಭಾಗದ ಬೀದಿಯಲ್ಲಿ ತುಲಾಭಾರ ಮಾಡಿಸಿಕೊಂಡರೆಂದು ದೇವಾಲಯದ ಮೂಲಗಳು ಹೇಳಿವೆ. ಸತ್ಯನ್ ಅವರ ತಂದೆ ರಖಂ ಔಷಧ ವ್ಯಾಪಾರಿಯಾಗಿದ್ದು ಅವರು ಈ ಹರಕೆ ಮಾಡಿಕೊಂಡಿದ್ದರು. ತುಲಾಭಾರಕ್ಕೆ ಬಳಸಲಾಗಿರುವ ಮಾತ್ರೆಗಳನ್ನು ಬಳಿಕ ಇಲ್ಲಿನ ಸರಕಾರಿ ಆಸ್ಪತ್ರೆಗೆ ನೀಡಲಾಯಿತು.
|