ಉತ್ತರ ಪ್ರದೇಶಕ್ಕಾಗಿ 80 ಸಾವಿರ ಕೋಟಿ ರೂಪಾಯಿಗಳ ಪ್ಯಾಕೇಜನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ, ಮಾಯವತಿಯವರ ಬಿಎಸ್‌ಪಿ ಪಕ್ಷವು ಸಂಸತ್ತಿನಲ್ಲಿ ಕೋಲಾಹಲವೆಬ್ಬಿಸಿದ್ದು, ಉಭಯ ಸದನಗಳ ಅಲ್ಪಕಾಲದ ಮುಂದೂಡಿಕೆಗೆ ಕಾರಣವಾಯಿತು.
ಬುಂದೇಲ್‌ಖಂಡ್ ಮತ್ತು ಪೂರ್ವಾಂಚಲ್‌ದ ಹೆಸರಿನಲ್ಲಿ ರಾಜಕೀಯ ನಿಲ್ಲಿಸಿ ಎಂಬ ಘೋಷಣೆಗಳನ್ನು ಕೂಗುತ್ತಿದ್ದ ಬಿಎಸ್‌ಪಿ ಸದಸ್ಯರು, ಈ ಎರಡು ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ತಕ್ಷಣ ಸಹಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಹೊಸಸದಸ್ಯರ ಪ್ರಮಾಣವಚನ ಸ್ವೀಕಾರವಾದ ತಕ್ಷಣ ಸಭಾಧ್ಯಕ್ಷ ಸೋಮನಾಥ್ ಚಟರ್ಜಿಯವರು ಭೂ ದಿನಾಚರಣೆಯ ಸಂದೇಶ ಓದಿದರು. ಅದು ಮುಗಿಯುತ್ತಿದ್ದಂತೆ, ಬಿಎಸ್ಪಿಯ ಬ್ರಜೇಶ್ ಪಾಟಕ್ ಅವರು ಪ್ರಶ್ನೋತ್ತರ ಅವಧಿಯನ್ನು ಅಮಾನತ್ತುಗೊಳಿಸಿ ಬುಂದೇಲ್‌ಖಂಡ್ ರೈತರ ಸ್ಥಿತಿಗತಿಯ ಕುರಿತು ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದರು.
ಸದನದಲ್ಲಿ ತೀವ್ರ ಕೋಲಾಹಲ ಉಂಟಾದಾಗ 50 ನಿಮಿಷಗಳ ಕಾಲ ಲೋಕಸಭೆಯನ್ನು ಮುಂದೂಡಲಾಯಿತು. ರಾಜ್ಯಸಭೆಯಲ್ಲೂ ಬಿಎಸ್‌ಪಿ ಸದಸ್ಯರು ಗದ್ದಲ ನಡೆಸಿದ್ದು, 15 ನಿಮಿಷಗಳ ಮುಂದೂಡಿಕೆಗೆ ಕಾರಣವಾಯಿತು. ಸದನವು ಮರು ಸಮಾವೇಶಗೊಂಡಾಗ ಘೋಷಣೆ ಕೂಗಿದ ಬಿಎಸ್‌ಪಿ ಸದಸ್ಯರು ಸಭಾತ್ಯಾಗ ನಡೆಸಿದರು.
ಧರಣಿಯಲ್ಲಿ ಇಂದು ಪ್ರಮಾಣವಚನ ಸ್ವೀಕರಿಸಿದ ಬಿಎಸ್‌ಪಿ ಸದಸ್ಯರೂ ಪಾಲ್ಗೊಂಡು ಮೊದಲ ದಿನದ ವರ್ತನೆಗೆ, ಚಟರ್ಜಿಯವರ ಬೈಗುಳ ತಿನ್ನಬೇಕಾಯಿತು.
|