ನವದೆಹಲಿ: ಇರಾನ್ ಜೊತೆಗೆ ಭಾರತದ ಕುರಿತ ವ್ಯವಹಾರಕ್ಕೆ ಸಂಬಂಧಿಸಿದಂತೆ ಮೂಗು ತೂರಿಸಲು ಯತ್ನಿಸಿರುವ ಅಮೆರಿಕಕ್ಕೆ ಸರಿಯಾದ ತಿರುಗೇಟು ನೀಡಿರುವ ಭಾರತ, ಪರ್ಷಿಯಾದ ರಾಷ್ಟ್ರದೊಂದಿಗಿನ ನಮ್ಮ ಸಂಬಂಧಕ್ಕೆ ನಮಗೆ ಯಾವುದೇ 'ಮಾರ್ಗದರ್ಶನದ' ಅಗತ್ಯವಿಲ್ಲ, ಉಭಯ ರಾಷ್ಟ್ರಗಳು ತಮ್ಮ ಎಲ್ಲಾ ಸಂಬಂಧಗಳನ್ನು ನಿರ್ವಹಿಸಲು ಸಂಪೂರ್ಣವಾಗಿ ಸಮರ್ಥವಾಗಿ ಎಂದು ಹೇಳಿದೆ.
"ಭಾರತ ಮತ್ತು ಇರಾನ್‌ಗಳು ಪುರಾತನ ನಾಗರಿಕತೆ ಹೊಂದಿದ್ದು, ಇವುಗಳ ನಡುವೆ ಶತಮಾನಗಳ ಕಾಲದಿಂದ ಸಂಭದವಿದೆ. ಉಭಯ ರಾಷ್ಟ್ರಗಳು ಸೂಕ್ತ ಕೋನ ಹಾಗೂ ಸೂಕ್ತ ಕಾಳಜಿ ಮತ್ತು ಎಚ್ಚರಿಕೆಯಿಂದ ತಮ್ಮ ಸಂಬಂಧವನ್ನು ನಿರ್ವಹಿಸಲು ಸಮರ್ಥವಾಗಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ನವ್‌ತೇಜ್ ಸರ್ನಾ ಹೇಳಿದ್ದಾರೆ.
ಇರಾನ್ ಅಧ್ಯಕ್ಷ ಮಹ್ಮೂದ್ ಅಹಮದಿನೆಜಾದ್ ಅವರು ಮುಂದಿನ ವಾರ ಭಾರತಕ್ಕೆ ಭೇಟಿ ನೀಡುವ ವೇಳೆಗೆ, ಇರಾನ್ ಅಣು ಯೋಜನೆಯ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಪಾಸು ಮಾಡಿರುವ ಮಸೂದೆಯನ್ನು ಅನುಸರಿಸುವಂತೆ ಮಾಡುವಂತೆ ಹೇಳಬೇಕು ಎಂಬುದಾಗಿ ಅಮೆರಿಕದ ವಿದೇಶಾಂಗ ಇಲಾಖೆಯು ಮಂಗಳವಾರ ಸಲಹೆ ಮಾಡಿತ್ತು.
ಇರಾನ್ ಅಥವಾ ಭಾರತ ಎರಡೂ ರಾಷ್ಟ್ರಗಳಿಗೂ ಯಾವುದೇ ಮಾರ್ಗದರ್ಶನಗಳ ಅವಶ್ಯಕತೆ ಇಲ್ಲ ಎಂದು ಹೇಳಿರುವ ಸರ್ನಾ, ಒಪ್ಪಂದ ಮತ್ತು ಮಾತುಕತೆಗಳು ಶಾಂತಿಗೆ ಹಾದಿಯಾಗಲಿದೆ ಎಂಬುದು ಉಭಯ ರಾಷ್ಟ್ರಗಳ ನಂಬುಗೆಯಾಗಿದೆ ಎಂದು ಹೇಳಿದ್ದಾರೆ.
|