ಭಾರತದ ಭೇಟಿಗೆ ಆಗಮಿಸುತ್ತಿರುವ ಇರಾನ್ ಅಧ್ಯಕ್ಷ ಮಹ್ಮೂದ್ ಅಹ್ಮದಿನೆಜಾದ್ ಅವರೊಂದಿಗೆ ಇರಾನ್ ಕೈಗೆತ್ತಿಕೊಂಡಿರುವ ಅಣ್ವಸ್ತ್ರ ಕಾರ್ಯಕ್ರಮವನ್ನು ಕೈಬಿಡುವಂತೆ ಸಲಹೆ ನೀಡಬೇಕು ಎಂದು ಅಮೆರಿಕ ಸೂಚಿಸಿರುವುದರ ವಿರುದ್ಧ ಎಡಪಕ್ಷಗಳು ಕಿಡಿ ಕಾರಿದ್ದು, ಅಮೆರಿಕದ ರಾಯಭಾರಿಯನ್ನು ಕರೆಸಿ ಪ್ರತಿಭಟನೆ ಸಲ್ಲಿಸಿ ಎಂದು ಎಡಪಕ್ಷಗಳು ಸರಕಾರವನ್ನು ಆಗ್ರಹಿಸಿವೆ.
ರಾಜ್ಯಸಭೆಯ ಶೂನ್ಯವೇಳೆಯಲ್ಲಿ ಸಿಪಿಐಎಂ ನಾಯಕಿ ಬೃಂದಾ ಕಾರಟ್ ಈ ವಿಷಯ ಪ್ರಸ್ತಾಪಿಸಿ ಸರಕಾರ ಅಮೆರಿಕದ ರಾಯಭಾರಿಯನ್ನು ಕರೆಸಿ ಅಮೆರಿಕ ನೀಡಿರುವ ಅನಪೇಕ್ಷಿತ ಮತ್ತು ಅನಗತ್ಯ ಸಲಹೆಯ ವಿರುದ್ಧ ಪ್ರತಿಭಟನೆಯನ್ನು ವ್ಯಕ್ತಪಡಿಸಬೇಕು ಎಂದು ಒತ್ತಾಯಿಸಿದರು.
ಇರಾನ್ ಜೊತೆಗೆ ಯಾವ ರೀತಿ ಸಂಬಂಧ ಕಾಯ್ದುಕೊಳ್ಳಬೇಕು ಎನ್ನುವುದು ನಮಗೆ ಬಿಟ್ಟ ವಿಚಾರ ಈ ವಿಷಯದಲ್ಲಿ ಅಮೆರಿಕದ ಸಲಹೆ ಬೇಕಿಲ್ಲ ಎಂದು ಭಾರತ ಈಗಾಗಲೇ ತನ್ನ ಅನಿಸಿಕೆಯನ್ನು ಕಠಿಣ ಶಬ್ಧಗಳಲ್ಲಿ ತಿಳಿಸಿದೆ. ಆದರೂ ಭಾರತದಲ್ಲಿ ಇರುವ ಅಮೆರಿಕದ ರಾಯಭಾರಿ ಡೆವಿಡ್ ಮುಲ್ಫ್ರೋಡ್ ಅವರನ್ನು ಕರೆಸಬೇಕು ಎಂದು ಕಾರಟ್ ಹೇಳಿದ್ದಾರೆ.
ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮಕ್ಕೆ ನಿಯಂತ್ರಣ ಹಾಕುವ ಉದ್ದೇಶದಿಂದ ಅಮೆರಿಕ ನೀಡಿದ ಸಲಹೆಗೆ ಗಂಭೀರವಾಗಿ ಪ್ರತಿಕ್ರಿಯಿಸಿದ ಕಾರಟ್ ಅವರು ತನ್ನ ವಿದೇಶಾಂಗ ನೀತಿಯಲ್ಲಿ ಭಾರತವನ್ನು ಅಮೆರಿಕ ತನ್ನ ಸಹವರ್ತಿಯಂತೆ ಕಾಣುತ್ತಿದೆ ಎಂದು ಆಪಾದಿಸಿದರು.
ಇರಾನ್ ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿರುವುದರಿಂದ ಇರಾನ್ ಕೈಗೆತ್ತಿಕೊಂಡಿರುವ ಅಣ್ವಸ್ತ್ರ ಕಾರ್ಯಕ್ರಮವು ಅಂತಾರಾಷ್ಟ್ರೀಯ ನಿಯಮಾವಳಿಗೆ ಅನುಗುಣವಾಗಿ ಇದೆ ಎಂದು ರಾಜ್ಯ ಸಭೆಗೆ ಮಾಹಿತಿ ನೀಡಿದರು.
|